

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದು, ಮಂಡ್ಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ(ಡಯಟ್)ಯ ಉಪ ನಿದೇರ್ಶಕರು ಹಾಗೂ ಪ್ರಾಂಶುಪಾಲರಾಗಿ ವರ್ಗಾವಣೆಗೊಂಡ ಡಿಡಿಪಿಐ ವೇದಮೂರ್ತಿರವರಿಗೆ ಸನ್ಮಾನಿಸಿ ಬೀಳ್ಕೊಡಲಾಯಿತು.
ಮಡಿಕೇರಿ ನಗರದ ಡಿಡಿಪಿಐ ಕಛೇರಿಯಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಕಛೇರಿಯ ಸಿಬ್ಬಂದಿ ಹಾಗೂ ಶಿಕ್ಷಕರ ಸಂಘಟನೆ ವತಿಯಿಂದ ಏರ್ಪಡಿಸಿದ್ದ ಸಮಾರಂಭದಲ್ಲಿ ಬೀಳ್ಕೊಡಲಾಯಿತು.
ಸನ್ಮಾನಿತಗೊಂಡ ಡಿಡಿಪಿಐ ವೇದಮೂರ್ತಿ ಮಾತನಾಡಿ, ವೀರ ಸೇನಾನಿಗಳ ನಾಡಿನ ಕೊಡಗಿನಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ತಾವು ಸಲ್ಲಿಸಿದ ಸೇವೆ ತೃಪ್ತಿ ತಂದಿದೆ. ಇದಕ್ಕೆ ಸಹಕರಿಸಿದ ಅಧಿಕಾರಿ ವರ್ಗ, ಸಿಬ್ಬಂದಿ, ಶಿಕ್ಷಕರ ಸಂಘಟನೆಗಳಿಗೆ ಕೃತಜ್ಞತೆ ಸಲ್ಲಿಸಿದ ಅವರು, ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶಕ್ಕೆ ಅಧಿಕಾರಿಗಳು ಹಾಗೂ ಶಿಕ್ಷಕರು ಶ್ರಮಿಸಿದ್ದಾರೆ ಎಂದರು.
ಕೂಡಿಗೆ ಡಯಟ್ ಸಂಸ್ಥೆಯ ಪ್ರಾಂಶುಪಾಲ ಬಿ.ವಿ.ಮಲ್ಲೇಶಪ್ಪ ಮಾತನಾಡಿ, ಸರಳ ಸಜ್ಜನಿಕೆಯ ವ್ಯಕ್ತಿತ್ವ ಹೊಂದಿರುವ ಡಿಡಿಪಿಐ ವೇದಮೂರ್ತಿರವರು ಜಿಲ್ಲೆಯಲ್ಲಿ ಶಿಕ್ಷಣ ಇಲಾಖೆಯಲ್ಲಿ ದಶಕಕ್ಕೂ ಹೆಚ್ಚು ಕಾಲ ವಿವಿಧ ಹಂತದ ಅಧಿಕಾರಿಯಾಗಿ ಉತ್ತಮ ಸೇವೆ ಸಲ್ಲಿಸುವ ಮೂಲಕ ಶಿಕ್ಷಕರ ಪ್ರೀತಿಗೆ ಪಾತ್ರರಾಗಿದ್ದಾರೆ. ಮುಂದಿನ ದಿನಗಳಲ್ಲಿ ಮಂಡ್ಯ ಜಿಲ್ಲೆಯಲ್ಲಿ ಕೂಡ ಉತ್ತಮ ಸೇವೆ ಸಲ್ಲಿಸಲಿ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಂಜುನಾಥ್, ಶ್ರೀಶೈಲ ಬೀಳಗಿ, ಕೆ.ವಿ.ಸುರೇಶ್, ಡಿಡಿಪಿಐ ಕಛೇರಿಯ ಶಿಕ್ಷಣಾಧಿಕಾರಿ ಡಾ ಬಿ.ಸಿ.ದೊಡ್ಡೇಗೌಡ, ಪತ್ರಾಂಕಿತ ಅಧಿಕಾರಿ ವಿನೋದ, ಜಿಲ್ಲಾ ಪ್ರಭಾರ ದೈಹಿಕ ಶಿಕ್ಷಣಾಧಿಕಾರಿ ಡಾ ಸದಾಶಿವಯ್ಯ ಎಸ್.ಪಲ್ಲೇದ್, ಶಿಕ್ಷಕರ ಸಂಘಟನೆಯ ಪದಾಧಿಕಾರಿಗಳು, ಕಛೇರಿಯ ಅಧಿಕಾರಿಗಳು ಸಿಬ್ಬಂದಿ ಹಾಜರಿದ್ದರು.