

ಕಾಸರಗೋಡು: ಮಂಜೇಶ್ವರ ತಾಲೂಕು ನಾಗರಿಕ ಪೂರೈಕೆ ಇಲಾಖೆ ಅಧಿಕಾರಿ ಎಂ.ಗಂಗಾಧರನ್ 29 ವರ್ಷಗಳ ಸೇವೆ ನಂತರ ನಿವೃತ್ತರಾಗಿದ್ದು, ಕಚೇರಿಯಲ್ಲಿ ಬೀಳ್ಕೊಡುಗೆ ಸಮಾರಂಭ ನಡೆಯಿತು.
ಮಂಜೇಶ್ವರ ತಾಲೂಕು ನಾಗರಿಕ ಪೂರೈಕೆ ಕಚೇರಿಯಲ್ಲಿ ಸಿಬ್ಬಂದಿ ವರ್ಗದ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬದಿಯಡ್ಕ ಸನಿಹದ ನೆಕ್ರಾಜೆ ನಿವಾಸಿಯಾಗಿರುವ ಗಂಗಾಧರ 1996ರಲ್ಲಿ ಸ್ಟೇಷನರಿ ಇಲಾಖೆಯಲ್ಲಿ ಸೇವೆ ಆರಂಭಿಸಿದ್ದು, 1997ರಲ್ಲಿ ನಾಗರಿಕ ಸರಬರಾಜು ಇಲಾಖೆಗೆ ಸೇರ್ಪಡೆಗೊಂಡು ಮಂಜೇಶ್ವರ, ಕಾಸರಗೋಡು ಸಹಾಯಕ ತಾಲೂಕು ಪೂರೈಕೆ ಅಧಿಕಾರಿಯಾಗಿ ಕೆಲಸ ನಿರ್ವಹಿಸಿದ್ದರು. ಸಪ್ಲೈಕೋ ಡಿಪೋ ಮ್ಯಾನೇಜರ್ ಆಗಿ ನಡೆಸಿದ ಉತ್ತಮ ಸೇವೆಗಾಗಿ ಸರ್ಕಾರದ ಉತ್ತಮ ಸೇವಾ ಪ್ರಶಸ್ತಿ ಪಡೆದುಕೊಂಡಿದ್ದರು.
ಜಿಲ್ಲಾ ನಾಗರಿಕ ಸರಬರಾಜು ಅಧಿಕಾರಿ ಕೆ.ಎನ್.ಬಿಂದು, ಗಂಗಾಧರ್ ಅವರನ್ನು ಗೌರವಿಸಿದರು. ಸಹಾಯಕ ತಾಲೂಕು ಸರಬರಾಜು ಅಧಿಕಾರಿ ಕೆ.ರಾಜೀವನ್ ಅಧ್ಯಕ್ಷತೆ ವಹಿಸಿದ್ದರು. ಮಂಜೇಶ್ವರ ರೇಶನಿಂಗ್ ಇನ್ಸ್‌ಪೆಕ್ಟರ್(ಆರ್‌ಐ) ಇ.ಪ್ರದೀಪ್ ಕುಮಾರ್ ಸ್ವಾಗತಿಸಿದರು. ಕುಂಬಳೆ ಆರ್.ಐ. ಸುರೇಶ್ ನಾಯ್ಕ ವಂದಿಸಿದರು.