

ಹುಬ್ಬಳ್ಳಿ: ನಗರದ ರಾಣಿ ಚನ್ನಮ್ಮ ಮೈದಾನದಲ್ಲಿ (ಈದ್ಗಾ) ಪ್ರತಿಷ್ಠಾಪಿಸಲಾಗಿದ್ದ ಗಣೇಶನ ಮೂರ್ತಿಯನ್ನು ಸೋಮವಾರ ಅದ್ದೂರಿ ಮೆರವಣಿಗೆ ನಡೆಸಿ ನಂತರ ಇಂದಿರಾ ಗಾಜಿನ ಮನೆ ಬಳಿಯ ಬಾವಿಯಲ್ಲಿ ಪೂಜಾ ಕೈಂಕರ್ಯ ನೆರವೇರಿಸಿ ವಿಸರ್ಜಿಸಲಾಯಿತು.
ಒಟ್ಟು ಮೂರು ದಿನಗಳವರೆಗೆ ಪ್ರತಿಷ್ಠಾಪಿಸಿದ್ದ ಮೂರ್ತಿಗೆ ಶಾಸಕ ಮಹೇಶ ಟೆಂಗಿನಕಾಯಿ ಹಾಗೂ ರಾಣಿ ಚನ್ನಮ್ಮ ಮೈದಾನ ಗಣೇಶೋತ್ಸವ ಮಹಾಮಂಡಳ ಕಾರ್ಯಕರ್ತರು ವಿವಿಧ ಧಾರ್ಮಿಕ ಕೈಂಕರ್ಯ ನೆರವೇರಿಸಿದರು. ನಂತರ ಎಂಎಲ್‌ಸಿ ಸಿ.ಟಿ. ರವಿ, ಆರ್‌ಎಸ್‌ಎಸ್ ಅಖಿಲ ಭಾರತ ವ್ಯವಸ್ಥಾ ಪ್ರಮುಖ ಮಂಗೇಶ ಭೇಂಡೆ ಅವರು ಮೆರವಣಿಗೆಗೆ ಚಾಲನೆ ನೀಡಿದರು.
ವಿವಿಧ ಕಲಾತಂಡಗಳ ಪ್ರದರ್ಶನದೊಂದಿಗೆ ಅದ್ದೂರಿ ಮೆರವಣಿಗೆ ನಡೆಯಿತು. ಪಂಚವಾದ್ಯ, ರಾಮ್‌ಡೋಲು-ತಾಷಾ, ಝಾಂಜ್ ಹಾಗೂ ಡಿಜೆ ಮೇಳಗಳು ಮೆರವಣಿಗೆಗೆ ಮೆರಗು ತಂದವು. ರಸ್ತೆಯುದ್ದಕ್ಕೂ ಭಗವಾಧ್ವಜ, ಕೇಸರಿ ಬಾವುಟಗಳು ರಾರಾಜಿಸಿದವು.
ನೆರೆದವರು ಗಣೇಶ, ಹನುಮಾನ್ ಹಾಗೂ ಶ್ರೀರಾಮನಿಗೆ ಜೈಕಾರ ಮೊಳಗಿಸಿದರು. ಗಣಪತಿ ಬಪ್ಪಾ ಮೋರಯಾ..ಎಂದು ಕೇಕೆ ಹಾಕಿದರಲ್ಲೇ ಡಿಜೆ ಸೌಂಡ್‌ಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು.
ಮೆರವಣಿಗೆಯು ಚನ್ನಮ್ಮ ಮೈದಾನದಿಂದ ಆರಂಭವಾಗಿ ಹಳೇ ಬಸ್ ನಿಲ್ದಾಣ ಮಾರ್ಗವಾಗಿ ನಗರದ ಇಂದಿರಾ ಗಾಜಿನ ಮನೆಯವರೆಗೆ ಸಾಗಿತು. ನಂತರ ಪಕ್ಕದ ಬಾವಿಯಲ್ಲಿ ಗಣೇಶ ಮೂರ್ತಿಯನ್ನು ವಿಸರ್ಜಿಸಲಾಯಿತು. ಇದಕ್ಕೂ ಮೊದಲು ಕೆಲ ಹೊತ್ತು ಮಳೆ ಬಂದಿದ್ದರಿಂದ ಮೆರವಣಿಗೆ ಬೇಗ ಸಾಗಿ ಬಾವಿ ತಲುಪಿತು.
ರಾಣಿ ಚನ್ನಮ್ಮ ಶ್ರೀ ಗಜಾನನ ಉತ್ಸವ ಮಹಾಮಂಡಳದ ಸ್ವಾಗತ ಸಮಿತಿ ಅಧ್ಯಕ್ಷ ಡಾ.ವಿ.ಎಸ್.ವಿ. ಪ್ರಸಾದ, ಮಹಾಮಂಡಳ ಅಧ್ಯಕ್ಷ ಸಂಜೀವ ಬಡಸ್ಕರ್, ಎಂಎಲ್‌ಸಿ ಪ್ರದೀಪ ಶೆಟ್ಟರ್, ಮೇಯರ್ ರಾಮಣ್ಣ ಬಡಿಗೇರ, ಮಾಜಿ ಸಚಿವ ಶಂಕರಪಾಟೀಲ ಮುನೇನಕೊಪ್ಪ, ಮಾಜಿ ಶಾಸಕ ಅಶೋಕ ಕಾಟವೆ, ಪಾಲಿಕೆ ಸದಸ್ಯರಾದ ಸಂತೋಷ ಚವ್ಹಾಣ, ಶಿವು ಮೆಣಸಿನಕಾಯಿ, ರಾಜಣ್ಣ ಕೊರವಿ, ಸುಭಾಷಸಿಂಗ್ ಜಮಾದಾರ, ಹಿಂದುಪರ ಸಂಘಟನೆಗಳ ಹಾಗೂ ಬಿಜೆಪಿ ಕಾರ್ಯಕರ್ತರು, ಭಕ್ತರು ಇದ್ದರು.
ಪೊಲೀಸ್ ಬಂದೋಬಸ್ತ್: ಗಣೇಶನ ವಿಸರ್ಜನೆ ಹಿನ್ನೆಲೆಯಲ್ಲಿ 300ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಡಿಸಿಪಿ, ಎಸಿಪಿ, ಇನ್‌ಸ್ಪೆಕ್ಟರ್‌ಗಳ ತಂಡ, ಕೆಎಸ್‌ಆರ್‌ಪಿ, ಸಿಎಆರ್, ರ‌್ಯಾಪಿಡ್ ಆ್ಯಕ್ಷನ್ ಫೋರ್ಸ್ ಸ್ಥಳದಲ್ಲಿದ್ದವು. ಸುತ್ತಲಿನ ಕಟ್ಟಡಗಳ ಮೇಲೆ ಪೊಲೀಸರ ಜತೆಗೆ ಕ್ಯಾಮರಾ ಕಣ್ಣುಗಳಿದ್ದವು. ಹು-ಧಾ ಪೊಲೀಸ್ ಆಯುಕ್ತ ಎನ್. ಶಶಿಕುಮಾರ, ಡಿಸಿಪಿಗಳಾದ ಮಹಾನಿಂಗ ನಂದಗಾವಿ, ಸಿ.ಆರ್. ರವೀಶ ಮೆರವಣಿಗೆಯುದ್ದಕ್ಕೂ ಇದ್ದರು.
ಸವಾರರ ಪರದಾಟ: ಗಣೇಶ ವಿಸರ್ಜನಾ ಮೆರವಣಿಗೆ ಹಿನ್ನೆಲೆಯಲ್ಲಿ ವಾಣಿಜ್ಯ ನಗರಿಯಲ್ಲಿ ವಾಹನಗಳ ಸಂಚಾರಕ್ಕೆ ಮಾರ್ಗ ಬದಲಾವಣೆ ಮಾಡಲಾಗಿತ್ತು. ಬೆಳಗ್ಗೆ 10ರಿಂದ ಸಂಜೆ 6 ಗಂಟೆವರೆಗೆ ಬೇರೆಡೆಯಿಂದ ಆಗಮಿಸಿದ್ದ ಪ್ರಯಾಣಿಕರು ಇಳಿಯಲು ಪ್ರತ್ಯೇಕ ನಿಲ್ದಾಣದ ವ್ಯವಸ್ಥೆ ಮಾಡಲಾಗಿತ್ತು. ಕೆಲವೆಡೆ ವಾಹನ ಸಂಚಾರ ಮಾಡಲು ಸವಾರರು ಪರದಾಡಿದರು.