ವಿದ್ಯಾರ್ಥಿಗಳು ಕೌಶಲತೆ ಹೆಚ್ಚಿಸಿಕೊಳ್ಳಲಿ: ಪ್ರಾಂಶುಪಾಲೆ ಡಾ.ವಿ.ಡಿ.ಸುವರ್ಣ ಸಲಹೆ

Farewell program for campers Mandya
Published on

ಮಂಡ್ಯ: ಇಂದಿನ ವಿದ್ಯಾರ್ಥಿಗಳು ವೈಜ್ಞಾನಿಕ ಅಂಶಗಳನ್ನು ಗುರುತಿಸಿಕೊಳ್ಳುವ ಕೌಶಲತೆ ಹೆಚ್ಚಿಸಿಕೊಳ್ಳಬೇಕು ಎಂದು ಕೆ.ವಿ.ಶಂಕರಗೌಡ ಶಿಕ್ಷಣ ಮಹಾವಿದ್ಯಾಲಯ ಪ್ರಾಂಶುಪಾಲೆ ಡಾ.ವಿ.ಡಿ.ಸುವರ್ಣ ಹೇಳಿದರು.

ನಗರದ ಬಾಲಭವನದಲ್ಲಿ ವೈಜ್ಞಾನಿಕ ಸಂಶೋಧನಾ ಪರಿಷತ್ ಜಿಲ್ಲಾ ಘಟಕ ಹಾಗೂ ನಿತ್ಯಸ್ನೇಹಿ ಟ್ರಸ್ಟ್ ಮತ್ತು ಲಯನ್ಸ್ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ನಾನು ವಿಜ್ಞಾನಿ-2025 ರಾಜ್ಯಮಟ್ಟದ ಟೆಲಿಸ್ಕೋಪ್ ತರಬೇತಿ ಅಭಿಯಾನಕ್ಕೆ ತೆರಳುತ್ತಿರುವ ಶಿಬಿರಾರ್ಥಿಗಳಿಗೆ ಬೀಳ್ಕೋಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಶ್ನೆ ಮಾಡುವ ಮನೋಸ್ಥೈರ್ಯ ಬೆಳೆಸಿಕೊಳ್ಳಬೇಕು. ತತ್ವಜ್ಞಾನಿ ಸಾಕ್ರಟಿಸ್ ಹೇಳಿದಂತೆ ಪ್ರಶ್ನೆಗಳಿಂದಲೇ ವಿಕಾಸ ಸಾಧ್ಯ ಎಂದಿರುವ ಮಾತು ನಮ್ಮ ಮನದಲ್ಲಿ ಸದಾ ನೆನಪಿಟ್ಟುಕೊಂಡಿರಬೇಕು. ಪ್ರಶ್ನೆಗಳ ಹಿಂದೆ ಉತ್ತರವಿರುತ್ತದೆ ಎಂದು ನುಡಿದರು.

ಪರಿಷತ್ ಜಿಲ್ಲಾ ಘಟಕದ ಗೌರವ ಸಲಹೆಗಾರ್ತಿ ಸುನಂದಾ ಜಯರಾಂ ಮಾತನಾಡಿ, ಜಿಲ್ಲೆಯಿಂದ ಆಯ್ಕೆಯಾಗಿರುವ ಸರ್ಕಾರಿ ಮತ್ತು ಖಾಸಗಿ ಶಾಲೆ ವಿದ್ಯಾರ್ಥಿಗಳು ನಾನು ವಿಜ್ಞಾನಿ ತರಬೇತಿಗೆ ತೆರಳುತ್ತಿರುವುದು ಶ್ಲಾಘನೀಯ. ಮಂಡ್ಯ ಎಲ್ಲವನ್ನೂ ಒಳಗೊಂಡ ಜಿಲ್ಲೆ. ಇಲ್ಲಿ ಮನಸ್ಸು, ಪ್ರೀತಿ, ಜವಾಬ್ದಾರಿ ಇದೆ. ಅದರ ಜತೆಗೆ ಮೌಢ್ಯತೆ, ಅಂಧಕಾರ ಇದೆ. ಈ ಅಜ್ಞಾನವನ್ನು ಹೊಗಲಾಡಿಸಲು ವಿಜ್ಞಾನದ ದೀವಿಗೆಯನ್ನು ಎತ್ತಿ ಹಿಡಿಯಬೇಕಿದೆ ಎಂದು ಹೇಳಿದರು.

ಪರಿಷತ್ ಜಿಲ್ಲಾಧ್ಯಕ್ಷ ಸಿ.ಶಿವಲಿಂಗಯ್ಯ ಮಾತನಾಡಿ, ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್‌ನಿಂದ ದೇಶ ಮತ್ತು ಕರ್ನಾಟಕದಲ್ಲಿಯೇ ಪ್ರಥಮ ಬಾರಿಗೆ ನಾನು ವಿಜ್ಞಾನಿ ತರಬೇತಿ ಆಯೋಜಿಸಿ ವೈಜ್ಞಾನಿಕ, ವಿಜ್ಞಾನದೆಡೆಗೆ ಹೊಸ ದಿಕ್ಸೂಚಿ ಬರೆಯುತ್ತಿದೆ. ದೊಡ್ಡಬಳ್ಳಾಪುರದಲ್ಲಿ ಅ.1ರಿಂದ ಅ.9ರವಗೆ ನಡೆಯುವ ನಾನು ವಿಜ್ಞಾನಿ ರಾಜ್ಯಮಟ್ಟದ ಟೆಲಿಸ್ಕೋಪ್ ತರಬೇತಿ ಅಭಿಯಾನಕ್ಕೆ ಸಾವಿರಾರು ವಿದ್ಯಾರ್ಥಿಗಳು ಬರುತ್ತಿದ್ದಾರೆ. ಉತ್ತಮ ತರಬೇತಿ ಪಡೆದು ಸದುಪಯೋಗಪಡಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಪರಿಷತ್ ರಾಜ್ಯಸಮಿತಿ ನಿರ್ದೇಶಕಿ ಪುಷ್ಪಲತಾ, ಜಿಲ್ಲಾ ಗೌರವಾಧ್ಯಕ್ಷೆ ವಸಂತಮ್ಮ, ಉಪಾಧ್ಯಕ್ಷ ಗುರುಮೂರ್ತಿ, ಕಾರ್ಯದರ್ಶಿ ಕೆಂಪರಾಜು, ಸಂಚಾಲಕಿ ಅನುಪಮಾ, ಡಾ.ಮರೀಗೌಡ, ಸಿದ್ದೇಗೌಡ, ದೇವರಾಜು, ಗಿರೀಶ್ ಇತರರಿದ್ದರು. ಇದೇ ಸಂದರ್ಭದಲ್ಲಿ ವಿವಿಧ ಶಾಲೆಗಳಿಂದ ನಾನು ವಿಜ್ಞಾನಿ ಶಿಬಿರಕ್ಕೆ ಆಯ್ಕೆಯಾಗಿರುವ 20ಕ್ಕೂ ಹೆಚ್ಚು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಗತ್ಯ ವಸ್ತು ಮತ್ತು ಸಮವಸ್ತಗಳನ್ನು ನೀಡಿ ಬೀಳ್ಕೋಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net