ವೃತ್ತಿ ಯಾವುದಿರಲಿ ನ್ಯಾಯ ಒದಗಿಸಲಿ: ಖ್ಯಾತ ಚರ್ಮರೋಗ ತಜ್ಞ ಡಾ.ಶಂಕರೇಗೌಡ ಸಲಹೆ

Farewell ceremony in Kattedoddi village Mandya
Published on

ಮಂಡ್ಯ: ಯಾವುದೇ ವೃತ್ತಿಯಾಗಲಿ ಎಲ್ಲದ್ದಕ್ಕೂ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಖ್ಯಾತ ಚರ್ಮರೋಗ ತಜ್ಞ ಡಾ.ಶಂಕರೇಗೌಡ ಸಲಹೆ ನೀಡಿದರು.

ತಾಲೂಕಿನ ಕಟ್ಟೆದೊಡ್ಡಿಯಲ್ಲಿ ಗ್ರಾಮಸ್ಥರ ವತಿಯಿಂದ ಆಯೋಜಿಸಿದ್ದ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕ ಟಿ.ರವಿಶಂಕರ್ ಅವರಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬರೂ ಒಂದಲ್ಲ ಒಂದು ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಮಾಜಕ್ಕೆ ತಮ್ಮ ಕಿಂಚಿತ್ತಾದರೂ ಅಳಿಲು ಸೇವೆ ಮಾಡಬೇಕು. ಹಾಗ ಮಾತ್ರ ನಾವು ಸಮಾಜಕ್ಕೆ ಕೊಡುಗೆ ನೀಡಿದಂತಾಗುತ್ತದೆ. ಒಂದೇ ಶಾಲೆಯಲ್ಲಿ ಇಷ್ಟು ವರ್ಷ ಸೇವೆ ಸಲ್ಲಿಸುವುದು ತುಂಬಾ ವಿರಳ. ಟಿ.ರವಿಶಂಕರ್ ಅವರು ಉತ್ತಮ ಬೋಧನಾ ಪ್ರವೃತ್ತಿಯಿಂದ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.

ಸನ್ಮಾನ ಸ್ವೀಕರಿಸಿದ ಶಿಕ್ಷಕ ಟಿ.ರವಿಶಂಕರ್ ಮಾತನಾಡಿ, ಕಳೆದ 28 ವರ್ಷಗಳ ಕಾಲ ಇದೇ ಶಾಲೆಯಲ್ಲೇ ಶಿಕ್ಷಕನಾಗಿ ಕೆಲಸ ಮಾಡಿರುವುದ ಅತ್ಯಂತ ತೃಪ್ತಿದಾಯಕವಾಗಿದೆ. ಇಲ್ಲಿಯೇ ನನ್ನ ವೃತ್ತಿ ಜೀವನ ಆರಂಭವಾಯಿತು. ಸುದೀರ್ಘ 28 ವರ್ಷದ ನಂತರ ಇದೇ ಶಾಲೆಯಲ್ಲೇ ನನ್ನ ನಿವೃತ್ತಿಯೂ ಆಗಿದ್ದು, ಇದು ನನ್ನ ಸೌಭಾಗ್ಯ. ಈ ಶಾಲೆಯಲ್ಲಿ ಕಲಿತ ಹಲವಾರು ಜನರು ವಿದ್ಯಾರ್ಥಿಗಳು ಉನ್ನತ ಹುದ್ದೆಗಳಲ್ಲಿ ಬೇರೆ ಸ್ಥಳಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಅದು ನನಗೆ ಸಂತಸ ತಂದಿದೆ ಎಂದು ಹೇಳಿದರು.

ಗ್ರಾಮದ ಪ್ರಮುಖ ಬೀದಿಗಳಲ್ಲಿ ಎತ್ತಿನಗಾಡಿಯಲ್ಲಿ ಜಾನಪದ ಕಲಾತಂಡಗಳೊಂದಿಗೆ ಟಿ.ರವಿಶಂಕರ್ ದಂಪತಿಯನ್ನು ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಯಿತು. ಕಾರ್ಯಕ್ರಮದ ಬಳಿಕ ಗ್ರಾಮಸ್ಥರಿಂದ ಅನ್ನದಾಸೋಹ ಏರ್ಪಡಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net