

ವಿಜಯವಾಣಿ ಸುದ್ದಿಜಾಲ ನೆಲ್ಯಾಡಿ
ಸಿಬ್ಬಂದಿ ಕೊರತೆ, ಪ್ರಾಕೃತಿಕ ವಿಕೋಪದ ನಡುವೆಯೂ ಗ್ರಾಹಕರಿಗೆ ಉತ್ತಮ ಸೇವೆ ನೀಡುವುದು ಮೆಸ್ಕಾಂಗೆ ಸವಾಲಿನ ಕೆಲಸ ಆಗಿದೆ. ಇಂತಹ ಸಂದರ್ಭದಲ್ಲಿ ಹೆಚ್ಚಿನ ಮುತುವರ್ಜಿ ವಹಿಸಿ ಕೆಲಸ ಮಾಡಬೇಕಾಗುತ್ತದೆ. ಇಲಾಖೆಯ ನೌಕರ ಅಬ್ದುಲ್ ರಹಿಮಾನ್ ಸವಾಲಿನ ನಡುವೆಯೂ ಉತ್ತಮ ಸೇವೆ ನೀಡುವುದರ ಮೂಲಕ ಜನ ಮನ್ನಣೆ ಪಡೆದಿದ್ದಾರೆ. ಅವರ ನಿವೃತ್ತ ಜೀವನ ಸುಖಮಯವಾಗಲಿ ಎಂದು ಮೆಸ್ಕಾಂ ಪುತ್ತೂರು ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ರಾಮಚಂದ್ರ ನುಡಿದರು.
ಸೇವಾ ನಿವೃತ್ತರಾದ ಮೆಸ್ಕಾಂ ಮೆಕ್ಯಾನಿಕ್ ದರ್ಜೆ-2ರ ನೌಕರ ಅಬ್ದುಲ್ ರಹಿಮಾನ್ ಬೀಳ್ಕೊಡುಗೆ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪನಿಯ ಪುತ್ತೂರು ವಿಭಾಗದ ನೆಲ್ಯಾಡಿ, ಉಪ್ಪಿನಂಗಡಿ ಮತ್ತು ಕಡಬ ಶಾಖೆಗಳಲ್ಲಿ ಸುಮಾರು 26ವರ್ಷ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿ ಪ್ರಸ್ತುತ ನೆಲ್ಯಾಡಿ ಕಾರ್ಯ ಮತ್ತು ಪಾಲನಾ ಶಾಖೆಯಲ್ಲಿ ಮೆಕ್ಯಾನಿಕ್ ದರ್ಜೆ-2ರ ನೌಕರನಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಅಬ್ದುಲ್ ರಹಿಮಾನ್ ಪಿ ಅವರಿಗೆ ಬೀಳ್ಕೊಡುಗೆ, ಸನ್ಮಾನ ಹಾಗೂ ನೆಲ್ಯಾಡಿಯ ವಿವಿಧ ಸಂಘ ಸಂಸ್ಥೆಗಳಿಂದ ಗೌರವಾರ್ಪಣೆ ಕಾರ್ಯಕ್ರಮ ಮೇ 31ರಂದು ನೆಲ್ಯಾಡಿಯಲ್ಲಿ ನಡೆಯಿತು.
ಕಡಬ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸಜಿಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಅಬ್ದುಲ್ ರಹಿಮಾನ್ ದಂಪತಿಯನ್ನು ಮೆಸ್ಕಾಂ ವತಿಯಿಂದ ಸನ್ಮಾನಿಸಿ ಉಡುಗೊರೆ ನೀಡಿ ಬೀಳ್ಕೊಡಲಾಯಿತು. ನೆಲ್ಯಾಡಿ ಮತ್ತು ಕೌಕ್ರಡಿ ಗ್ರಾಮಪಂಚಾಯಿತಿ, ಅಶ್ವಿನಿ ಆಸ್ಪತ್ರೆ, ಸಂತ ಜಾರ್ಜ್ ವಿದ್ಯಾಸಂಸ್ಥೆ, ಜೆಸಿಐ ನೆಲ್ಯಾಡಿ, ಆಟೋ ಚಾಲಕ ಮಾಲಕ ಸಂಘ, ಗ್ರಾಮಾಭಿವೃದ್ಧಿ ಯೋಜನೆ, ಜನ ಜಾಗೃತಿ ವೇದಿಕೆ, ಗೆಳೆಯರ ಬಳಗ ಗಾಂಧಿ ಮೈದಾನ, ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ಅಶ್ವತ ಗೆಳೆಯರ ಬಳಗ ಹೊಸಮಜಲು,ಅಯ್ಯಪ್ಪ ಸ್ವಾಮಿ ದೇವಸ್ಥಾನ ನೆಲ್ಯಾಡಿ ಕೌಕ್ರಾಡಿ, ಸೀಗಲ್ ಗ್ರೂಪ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಗೌರವಿಸಲಾಯಿತು.