ನಿವೃತ್ತ ಸಿಬ್ಬಂದಿಯನ್ನು ಗೌರವಿಸುವುದು ಕರ್ತವ್ಯ : ಅಹ್ಮದ್ ಬಾವ ಬಜಾಲ್ ಹೇಳಿಕೆ

Published on

ಉಳ್ಳಾಲ: ಮೀನುಗಾರರ ಹಿತರಕ್ಷಣೆಗಾಗಿ ಇರುವ ನಮ್ಮ ಸಂಸ್ಥೆಯಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವವರು ನಿವೃತ್ತರಾದಾಗ ಅವರನ್ನು ಗೌರವಪೂರ್ವಕವಾಗಿ ಬೀಳ್ಕೊಡುವುದು ನಮ್ಮ ಕರ್ತವ್ಯ ಎನ್ನುವ ಭಾವನೆ ನಮ್ಮದು ಎಂದು ಮಂಗಳೂರು ಕರಾವಳಿ ಅಲ್ಪಸಂಖ್ಯಾತ ಮೀನುಗಾರರ ಪ್ರಾಥಮಿಕ ಸಹಕಾರ ಸಂಘ ಉಪಾಧ್ಯಕ್ಷ ಅಹ್ಮದ್ ಬಾವ ಬಜಾಲ್ ಹೇಳಿದರು.

ಮಂಗಳೂರು ಕರಾವಳಿ ಅಲ್ಪಸಂಖ್ಯಾತ ಮೀನುಗಾರರ ಪ್ರಾಥಮಿಕ ಸಹಕಾರ ಸಂಘದಲ್ಲಿ 23ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಹರೀಶ್ ಅವರಿಗೆ ನಡೆದ ಬೀಳ್ಕೊಡುಗೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಂಗಳೂರು ತಾಪಂ ಮಾಜಿ ಸದಸ್ಯ ಮಹಮ್ಮದ್ ಮುಸ್ತಫಾ ಮಲಾರ್ ಮಾತನಾಡಿ, ಮೀನುಗಾರರಿಗೆ ಡೀಸೆಲ್‌ನಲ್ಲಿ ಸಬ್ಸಿಡಿ ನೀಡುವ ಮೂಲಕ ಅಭಿವೃದ್ಧಿಗೆ ಕೊಡುಗೆ ನೀಡುತ್ತಿರುವ ಸಂಸ್ಥೆ, ಲಾಭದಲ್ಲೂ ಆರ್ಥಿಕವಾಗಿ ನೊಂದವರಿಗೆ ನೆರವು ನೀಡುತ್ತಾ ಬಂದಿದೆ. ಸಂಸ್ಥೆಯಲ್ಲಿರುವ ಎಲ್ಲ ಸಿಬ್ಬಂದಿ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುತ್ತಿರುವುದು ಸಂಸ್ಥೆ ಬೆಳವಣಿಗೆಗೆ ಮಹತ್ತರ ಪಾತ್ರ ವಹಿಸಿದೆ ಎಂದರು.

ನಿರ್ದೇಶಕರಾದ ಟಿ.ಎಚ್.ಹಮೀದ್, ಪಿ.ಇಬ್ರಾಹಿಂ ಖಲೀಲ್, ಎ.ಎಂ.ಕೆ.ಇಬ್ರಾಹಿಂ, ಯು.ಟಿ.ಅಹ್ಮದ್ ಶರೀಫ್, ಬಿ.ಮಹಮ್ಮದ್ ಶಾಲಿ, ಮಹಮ್ಮದ್ ಅಶ್ರಫ್, ಎಸ್.ಕೆ.ಇಸ್ಮಾಯಿಲ್, ಎಂ.ಎ.ಗಫೂರ್, ಎ.ಎನ್.ಆರ್.ಅನ್ವರ್ ಉಪಸ್ಥಿತರಿದ್ದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಬ್ದುಲ್ ಲತೀಫ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net