ಹೆಸರು ಜೀವಂತವಿರುವ ಕೆಲಸ ಮಾಡಿ

mkg1a
Published on

ಜಗಳೂರು: ಸರ್ಕಾರಿ ನೌಕರಿಯಲ್ಲಿ ನಿವೃತ್ತಿ ಸಾಮಾನ್ಯ. ಆದರೆ, ಸೇವಾ ಅವಧಿಯಲ್ಲಿ ನೀವು ಮಾಡಿದ ಉತ್ತಮ ಕೆಲಸಗಳು ನಿಮ್ಮ ಉಸಿರು ನಿಂತರೂ ಹೆಸರು ಜೀವಂತವಾಗಿರಿಸುತ್ತವೆ ಎಂದು ಶಾಸಕ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪ ಹೇಳಿದರು.

ಇಲ್ಲಿನ ಗುರುಭವನದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ. ಮಹೇಶ್ವರಪ್ಪ ಅವರ ನಿವೃತ್ತಿ ಹಿನ್ನೆಲೆಯಲ್ಲಿ ನೌಕರರ ಸಂಘ, ವಿವಿಧ ಸಂಘ ಸಂಸ್ಥೆಗಳು ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಸೋಮವಾರ ಮಾತನಾಡಿದರು.

ನನಗೂ ಸೇರಿ ಸಾವಿರಾರು ವಿದ್ಯಾರ್ಥಿಗಳಿಗೆ ಊಟ ನೀಡಿ, ವಿದ್ಯಾಭ್ಯಾಸಕ್ಕೆ ಸಹಕಾರ ನೀಡಿದವರು ಮಹೇಶ್ವರಪ್ಪ ಅವರು ಎಂದು ಸ್ಮರಿಸಿದರು.
ಬೀಳ್ಕೊಡುಗೆ ಸ್ವೀಕರಿಸಿ ಮಾತನಾಡಿದ ಬಿ. ಮಹೇಶ್ವರಪ್ಪ , ನನ್ನ 33 ವರ್ಷಗಳ ಸೇವೆಯಲ್ಲಿ ಕಷ್ಟದಲ್ಲಿರುವ ಎಲ್ಲರಿಗೂ ಕೈಲಾದ ಸಹಾಯ ಮಾಡಿದ್ದೇನೆ. ಇಷ್ಟು ಜನರ ಪ್ರೀತಿ ವಿಶ್ವಾಸ ಕಂಡು ನನ್ನ ಜನ್ಮ ಸಾರ್ಥಕವಾಗಿದೆ ಎಂದರು.

ತಹಸೀಲ್ದಾರ್ ಜಿ. ಸಂತೋಷ್ ಕುಮಾರ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಕೆ. ನಾಗರಾಜ್, ಸಿಪಿಐ ಎಂ. ಶ್ರೀನಿವಾಸ್ ರಾವ್, ತಾಪಂ ಇಒ ವೈ.ಎಚ್. ಚಂದ್ರಶೇಖರ್, ನಿವೃತ್ತ ಇಓ ಲಕ್ಷ್ಮೀಪತಿ, ಸಿಡಿಪಿಒ ಬೀರೇಂದ್ರಕುಮಾರ್, ಕೃಷಿ ಅಧಿಕಾರಿ ಮಿಥುನ್ ಕಿಮಾವತ್, ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ವೆಂಕಟೇಶ್ ಮೂರ್ತಿ ಮತ್ತಿತರರಿದ್ದರು.

ಮಗು ದತ್ತು ಪಡೆದ ಶಾಸಕ: ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ. ಮಹೇಶ್ವರಪ್ಪ ನಿವೃತ್ತಿಯಾದ ನೆನಪಿಗಾಗಿ ಗ್ಯಾಂಗ್ರಿನ್ ಕಾಯಿಲೆಯಿಂದ ಬಳಲುತ್ತಿದ್ದ ಐದು ವರ್ಷದ ತುಳಸಿ ಎಂಬ ಹೆಣ್ಣು ಮಗುವನ್ನು ಶಾಸಕ ಬಿ. ದೇವೇಂದ್ರಪ್ಪ ದತ್ತು ಪಡೆದರು.
ಶಾಸಕರಾಗುವ ಮುನ್ನ ತೋರಣಗಟ್ಟೆಗೆ ಹೋಗಿದ್ದಾಗ ಬಡಪ್ಪ, ಸಾವಿತ್ರಮ್ಮ ದಂಪತಿ ಪುತ್ರಿ ತುಳಸಿ ಎಂಬ ಗ್ಯಾಂಗ್ರಿನ್‌ಗೆ ತುತ್ತಾಗಿದ್ದು ತಿಳಿದಿತ್ತು. ಶಾಸಕರಾದ ನಂತರ ನಾನು ತುಳಸಿಯನ್ನು ದತ್ತು ಪಡೆಯುವ ಎಂದು ಭರವಸೆ ನೀಡಿದ್ದರು. ಅದರಂತೆ ಮಗುವನ್ನು ಎಂಎಸ್ ರಾಮಯ್ಯ ಆಸ್ಪತ್ರೆಗೆ ಸೇರಿಸಿ ಕೃತಕ ಪಾದ ಜೋಡಣೆ ಮಾಡಿಸಿ ಓಡಾಡುವಂತೆ ಮಾಡಿದ್ದು, ಮುಂದೆಯೂ ಆಕೆಯ ಎಲ್ಲ ಖರ್ಚು ನಾನೇ ಭರಿಸುತ್ತೇನೆ ಎಂದು ಘೋಷಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net