ಡಾ.ವಿಷ್ಣುಗೆ ಕರ್ನಾಟಕ ರತ್ನ ಘೋಷಣೆಗೆ ಅಭಿಮಾನಿಗಳ ಸಂತಸ

Published on

ಮೈಸೂರು: ನಟ ಡಾ.ವಿಷ್ಣುವರ್ಧನ್ ಅವರಿಗೆ ರಾಜ್ಯ ಸರ್ಕಾರ ಕರ್ನಾಟಕ ರತ್ನ ಘೋಷಣೆ ಮಾಡಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುವುದಾಗಿ ಡಾ.ವಿಷ್ಣು ಸೇನಾ ಸಮಿತಿ ಪ್ರಧಾನ ಕಾರ್ಯದರ್ಶಿ ಎಂ.ಶಿವಕುಮಾರ್ ತಿಳಿಸಿದರು.

ನಟ ಡಾ.ವಿಷ್ಣುವರ್ಧನ್ ಅವರಿಗೆ ಕರ್ನಾಟಕ ರತ್ನ ನೀಡುವಂತೆ 15 ವರ್ಷಗಳಿಂದ ಅಭಿಮಾನಿಗಳು ಸಾಕಷ್ಟು ಹೋರಾಟ ಮಾಡಿಕೊಂಡು ಬಂದಿದ್ದರು. ಈಗ ಅವರ 75ನೇ ವರ್ಷದ ಹುಟ್ಟುಹಬ್ಬದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಘೋಷಣೆ ಮಾಡಿರುವುದು ಅಭಿಮಾನಿಗಳಿಗೆ ಸಂತಸವನ್ನುಂಟು ಮಾಡಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಈ ಹಿನ್ನೆಲೆಯಲ್ಲಿ ಕರ್ನಾಟಕ ರತ್ನ ಘೋಷಣೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮುಂದಿನ ಬಾರಿ ಮೈಸೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಗೌರವ ಸಮರ್ಪಿಸಲಾಗುವುದು ಎಂದರು.

ಚಿತ್ರರಂಗದಿಂದ ಸಾಕಷ್ಟು ನಟರು ಡಾ.ವಿಷ್ಣುವರ್ಧನ್ ಅವರ ಹೆಸರು ಬಳಸಿಕೊಂಡು ಚಿತ್ರ ಮಾಡಿದ್ದಾರೆ. ಆದರೆ ಹೋರಾಟಕ್ಕೆ ಮಾತ್ರ ಬಂದಿಲ್ಲ. ಚಿತ್ರ ನಿರ್ದೇಶಕರಾದ ಎಸ್.ನಾರಾಯಣ್, ರಾಜೇಂದ್ರ ಸಿಂಗ್ ಬಾಬು, ನಟಿಯರಾದ ಜಯಮಾಲಾ, ತಾರಾ, ಶ್ರುತಿ, ಮಾಳವಿಕಾ ಅವಿನಾಶ್ ಇತೀಚೆಗೆ ಕರ್ನಾಟಕ ರತ್ನ ನೀಡುವಂತೆ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದರು. ಇದಕ್ಕೆ ಶ್ರಮಿಸಿದ ಅವರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.

ಸಮಿತಿ ಅಧ್ಯಕ್ಷ ಲೋಹಿತ್‌ಗೌಡ, ಪದಾಧಿಕಾರಿ ಬಿ.ಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net