ಅಂಬಿ ಹುಟ್ಟುಹಬ್ಬದಲ್ಲಿ ಅಭಿಮಾನಿಗಳ ಸಂಭ್ರಮ

SRP_29-01jpj
ಶ್ರೀರಂಗಪಟ್ಟಣದ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕುವೆಂಪು ವೃತ್ತದಲ್ಲಿ ಬುಧವಾರ ಅಂಬರೀಶ್ ಜನ್ಮದಿನದ ಅಂಗವಾಗಿ ಅಭಿಮಾನಿಗಳು ಅಂಬಿ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ನೇರವೇರಿಸಿದರು.
Published on

ಶ್ರೀರಂಗಪಟ್ಟಣ : ಮಾಜಿ ಸಚಿವ, ರೆಬೆಲ್ ಸ್ಟಾರ್ ದಿ. ಡಾ.ಅಂಬರೀಶ್ ಅವರ 72ನೇ ಜನ್ಮದಿನವನ್ನು ಬುಧವಾರ ಅಭಿಮಾನಿಗಳು ಸಂಭ್ರಮದಿಂದ ಆಚರಿಸಿದರು.

ಪಟ್ಟಣದ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕುವೆಂಪು ವೃತ್ತದಲ್ಲಿ ಬುಧವಾರ ಜಮಾವಣೆಗೊಂಡ ಅಭಿಮಾನಿಗಳು ಡಾ.ಅಂಬರೀಶ್ ಅವರ ಬೃಹತ್ ಕಟೌಟ್‌ಗೆ ಪೂಜೆ ಸಲ್ಲಿಸುವ ಜತೆಗೆ ಪುಷ್ಪಾರ್ಚನೆಯೊಂದಿಗೆ ಹಾಲಿನ ಅಭಿಷೇಕ ನೆರವೇರಿಸಿದರು.

ನಂತರ ಸಾರ್ವಜನಿಕ ಆಸ್ಪತ್ರೆಗೆ ತೆರಳಿದ ಅಭಿಮಾನಿಗಳು ದಾಖಲಾಗಿದ್ದ ಒಳ ಹಾಗೂ ಹೊರರೋಗಿಗಳು ಸೇರಿದಂತೆ ಆಸ್ಪತ್ರೆಯ ಎಲ್ಲ ಸಿಬ್ಬಂದಿಗೆ ಹಣ್ಣು, ಬ್ರೆಡ್ ಮತ್ತು ಪೌಷ್ಟಿಕ ಆಹಾರಗಳ ಪೊಟ್ಟಣ ವಿತರಣೆ ಮಾಡಿದರು.

ಅಂಬರೀಶ್ ಕುಟುಂಬದ ಆಪ್ತ ಹಾಗೂ ಕ್ಷೇತ್ರದ ಹಿರಿಯ ಮುಖಂಡ ಎಸ್.ಎಲ್.ಲಿಂಗರಾಜು ಮಾತನಾಡಿ, ಅಂಬರೀಶ್ ಚಿತ್ರರಂಗದಲ್ಲಿ ಮಾತ್ರವಲ್ಲ, ನಿಜಜೀವನದಲ್ಲೂ ಆದರ್ಶ ವ್ಯಕ್ತಿ. ಅಮರನಾಥ್ ಆಗಿದ್ದ ಅವರು ಮಂಡ್ಯದ ಸಂಸದರಾಗಿ, ರಾಜ್ಯದ ಸಚಿವರಾಗಿಯೂ ನಾಡಿನ ಜನರಿಗೆ ಅನೇಕ ಕೊಡುಗೆ ಕಲ್ಪಿಸುವ ಜತೆಗೆ ಕನ್ನಡ ನಾಡು, ಕನ್ನಡ ಭಾಷೆ, ಜೀವನದಿ ಕಾವೇರಿ ಸೇರಿದಂತೆ ಪ್ರಮುಖವಾಗಿ ಮಂಡ್ಯದ ಜನರಿಗಾಗಿ ಕಡೇ ಘಳಿಗೆಯಲ್ಲೂ ಉಸಿರು ನೀಡಿದ ಏಕೈಕ ಜನನಾಯಕ. ಇಂದಿಗೂ ಅಂಬರೀಶ್ ಅವರ ಅನೇಕ ಜನಪರ ಕಾರ್ಯಗಳು ಹಾಗೂ ಅವರ ಉದಾರತೆಯ ನೆರವು ಲಕ್ಷಾಂತರ ಜನರ ಮನದಲ್ಲಿ ಉಳಿದಿದ್ದು, ಅಭಿಮಾನಿಗಳ ಅಮರನಾಥ್ ಸದಾ ಅಮರ ಎಂದರು.

ಅಂಬರೀಶ್ ಅಭಿಮಾನಿಗಳ ಸಂಘದ ತಾಲೂಕು ಅಧ್ಯಕ್ಷ ಟಿ.ಎಂ.ಹೊಸೂರು ಮಹೇಶ್, ಕೆಪಿಸಿಸಿ ಸದಸ್ಯ ಗಂಜಾಂ ಗಂಗಾಧರ್, ಪುರಸಭಾ ಮಾಜಿ ಸದಸ್ಯ ಸುನೀಲ್ ಕುಮಾರ್, ಮುಖಂಡರಾದ ಗಣಂಗೂರು ಕೃಷ್ಣಕುಮಾರ್, ನಗುವನಹಳ್ಳಿ ಮಹದೇವಸ್ವಾಮಿ, ಸಬ್ಬನಕುಪ್ಪೆ ಪ್ರವೀಣ್, ನಾಗರಾಜು, ಟಿ.ಎಂ.ಹೊಸೂರು ನಾಗರಾಜು, ಗೌಡಹಳ್ಳಿ ದೇವರಾಜು, ಚಿಂದಗಿರಿಕೊಪ್ಪಲು ಗೋಪಾಲ್, ಮುಂಡುಗದೊರೆ ಮೋಹನ್‌ಕುಮಾರ್, ತಮ್ಮಣ್ಣ, ಮಹೇಶ್, ಗಂಜಾಂ ರವಿಚಂದ್ರು ಸೇರಿದಂತೆ ಪಕ್ಷಾತೀತವಾಗಿ ಹಲವು ಮುಖಂಡರು ಈ ವೇಳೆ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net