ಫ್ಯಾನ್ಸಿ ಮುತ್ತಣ್ಣ ಅವರ "ಪೂ ಬಳ್ಳಿ" ಬಿಡುಗಡೆ

Fancy Muttanna's Poo Valli released
Published on

ಮಡಿಕೇರಿ:

ಜ್ಞಾನ ಸಂಪಾದನೆ ಮತ್ತು ಸಂಸ್ಕೃತಿಯ ಉಳಿವಿಗೆ ಪುಸ್ತಕ ಓದುವ ಹಾಗೂ ಬರೆಯುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಹೇಳಿದರು. ಕೊಡವ ಮಕ್ಕಡ ಕೂಟದ ೮೧ನೇ ಪುಸ್ತಕ ಹಾಗೂ ಲೇಖಕಿ ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ ಬರೆದಿರುವ ೬ನೇ ಪುಸ್ತಕ "ಪೂ ಬಳ್ಳಿ" ಯನ್ನು ಇಲ್ಲಿನ ಪತ್ರಿಕಾ ಭವನದಲ್ಲಿ ಶುಕ್ರವಾರ ಬಿಡುಗಡೆ ಮಾಡಿ ಮಾತನಾಡಿದರು.

ವಿಶಿಷ್ಟವಾಗಿರುವ ಕೊಡವ ಭಾಷೆಯ ಮೇಲಿನ ಅಭಿಮಾನದಿಂದ ಅನೇಕರು ಕೊಡವ ಪುಸ್ತಕವನ್ನು ಹೊರತರುತ್ತಿದ್ದಾರೆ. ಆ ಮೂಲಕ ಭಾಷೆ ಮತ್ತು ಸಂಸ್ಕೃತಿಯ ಉಳಿವಿಗೆ ಪ್ರತ್ನಿಸುತ್ತಿದ್ದಾರೆ. ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕಾದರೆ, ಆಚಾರ, ವಿಚಾರ ತಿಳಿದುಕೊಳ್ಳಬೇಕಾದರೆ ಪುಸ್ತಕ ಓದಬೇಕು ಮತ್ತು ಬರೆಯುವ ಹವ್ಯಾಸ ಬೆಳೆಸಿಕೊಳ್ಳಬೇಕು. ನಮ್ಮ ಪೂರ್ವಜರು ನೀಡಿರುವ ಸಂದೇಶವನ್ನು ಲೇಖಕಿ ತಮ್ಮ "ಪೂ ಬಳ್ಳಿ" ಪುಸ್ತಕದಲ್ಲಿ ಸಂಕ್ಷಿಪ್ತವಾಗಿ ವಿವರಿಸಿದ್ದಾರೆ. ಇದು ಮುಂದಿನ ಪೀಳಿಗೆಗೆ ಮಾರ್ಗದರ್ಶನ ಮತ್ತು ಪ್ರೇರಣೆ ನೀಡುವಂತಿದೆ ಎಂದರು.

ಹಿರಿಯ ಸಾಹಿತಿ ಉಳ್ಳಿಯಡ ಡಾಟಿ ಪೂವಯ್ಯ ಮಾತನಾಡಿ, ಸಾಹಿತ್ಯಕ್ಕೆ ಎಂದಿಗೂ ಸಾವಿಲ್ಲ, ಯಾವುದೇ ಲಾಭವನ್ನು ನಿರೀಕ್ಷೆ ಮಾಡದೆ, ಸ್ವಾರ್ಥ ಮನೋಭಾವನೆಯನ್ನು ಬಿಟ್ಟು ಎಲ್ಲರಿಗೂ ಮೆಚ್ಚುಗೆ ಆಗುವ ರೀತಿಯಲ್ಲಿ ಬರೆಯುವುದೇ ಉತ್ತಮ ಸಾಹಿತ್ಯ. ಎಲ್ಲರ ಜೀವನಕ್ಕೂ ಅನ್ವಯವಾಗುವ ರೀತಿಯ ಬರಹಗಳು ಹೆಚ್ಚು ಹೆಚ್ಚು ರಚನೆಯಾಗಬೇಕು. ವಿಸ್ತಾರವಾದ ವಿಚಾರವನ್ನು ಚುಟುಕಾಗಿ ಕವನದಲ್ಲಿ ವಿವರಿಸುವ ಪ್ರಯತ್ನ ಪೂ ಬಳ್ಳಿ ಪುಸ್ತಕದ ಲೇಖಕಿ ಫ್ಯಾನ್ಸಿ ಮುತ್ತಣ್ಣ ಮಾಡಿದ್ದಾರೆ. ಸಾಂಸಾರಿಕ ವಿಚಾರವನ್ನು ವಿನೋದವಾಗಿ ವಿವರಿಸಿದ್ದಾರೆ, ಇದು ಓದುಗರಿಗೆ ಸಂತೋಷವನ್ನು ನೀಡುತ್ತದೆ ಎಂದು ಹೇಳಿದರು.
ಪೂ ಬಳ್ಳಿ ಪುಸ್ತಕದ ಲೇಖಕಿ ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ ಮಾತನಾಡಿ, ಬರಹಗಾರರನ್ನು ಪ್ರೋತ್ಸಾಹಿಸಿ, ಮುಖ್ಯ ವಾಹಿನಿಗೆ ತಂದಾಗ ಪ್ರತಿಭೆಗಳು ಅನಾವರಣಗೊಳ್ಳುತ್ತವೆ. ಇದು ಸಾಹಿತ್ಯದ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದರು.

ಸಾಹಿತಿ ಐಚಂಡ ರಶ್ಮಿ ಮೇದಪ್ಪ, ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಮಾತನಾಡಿದರು. ವ್ಯಾಲಿ ಡ್ಯೂ ಕೊಡವ ಕಲ್ಚರಲ್ ಅಸೋಸಿಯೇಷನ್ ಅಧ್ಯಕ್ಷ ಹಂಚೆಟ್ಟಿರ ಮನು ಮುದ್ದಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net