

ವಿರಾಜಪೇಟೆ:
ಸಂಗೀತ ಮತ್ತು ನೃತ್ಯ ಎಂಥವರನ್ನೂ ಸೆಳೆಯಬಲ್ಲ ಮಾಂತ್ರಿಕ ಶಕ್ತಿಯನ್ನು ಹೊಂದಿದೆ ಎಂದು ಸ್ವರಾರ್ಣವ ಸಂಗೀತ ಶಾಲೆಯ ವಿದ್ವಾನ್ ದಿಲಿಕುಮಾರ್ ಅಭಿಪ್ರಾಯಪಟ್ಟರು. ವಿರಾಜಪೇಟೆಯ ನಾಟ್ಯ ಮಯೂರಿ ನೃತ್ಯ ಶಾಲೆಯ ವತಿಯಿಂದ ಬಾಲಾಂಜನೇಯ ದೇವಾಸ್ಥಾನ ಸಭಾಂಗಣದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಗುರುವಾರ ನಡೆದ ಛದ್ಮ ವೇಷ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಂದಿನ ಮಕ್ಕಳಿಗೆ ಬಾಲ್ಯದ ಅಭಿರುಚಿಯನ್ನು ಗುರುತಿಸಿ ಅವರ ಪ್ರತಿಭೆಯ ಮಾರ್ಗದಲ್ಲಿ ನಡೆಯಲು ಪ್ರೇರೇಪಿಸಬೇಕು. ಬದುಕನ್ನು ಯಾಂತ್ರಿಕರಣಗೊಳಿಸಬಾರದು. ಸಂಗೀತ, ಸದಭಿರುಚಿ ಸಾಹಿತ್ಯದ ಅಭ್ಯಾಸದಿಂದ ಉತ್ತಮ ಸಂಸ್ಕಾರ ನಿರ್ಮಾಣ ಸಾಧ್ಯ. ನಮ್ಮ ನಾಡಿನಲ್ಲಿ ಶ್ರೇಷ್ಠ ಸಾಂಸ್ಕೃತಿಕ ಪರಂಪರೆಯನ್ನು ಕಾಣುತ್ತೇವೆ. ಸಂಗೀತ ಮತ್ತು ನೃತ್ಯ ಶಾಲೆ, ಶ್ರೇಷ್ಠ ಸಂಸ್ಕೃತಿ ಮತ್ತು ಸಂಪ್ರದಾಯದ ಸಂಕೇತವಾಗಿದೆ ಎಂದರು.
ಸಾಹಿತಿಗಳಾದ ಪುಷ್ಪಲತಾ ಶಿವಪ್ಪ ಮಾತನಾಡಿ, ವಿದ್ಯಾರ್ಥಿಗಳು ರಾಮಾಯಣ ಮಹಾಭಾರತದಂತಹ ಕಾವ್ಯಗಳನ್ನು ಹೆಚ್ಚು ಹೆಚ್ಚಾಗಿ ಓದಿ ಅದರಲ್ಲಿರುವ ತತ್ವಸಾರವನ್ನು ತಿಳಿದು ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಹೇಳಿದರು.
ವಿರಾಜಪೇಟೆ ಜಾನಪದ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ, ರಜಿತಾ ಕಾರ್ಯಪ್ಪ ಮಾತನಾಡಿ, ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರದ ತಿಳುವಳಿಕೆಯ ಜೊತೆಗೆ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳುವುದನ್ನು ಕಲಿಸುವಂತಾಗಬೇಕು. ಮಕ್ಕಳಿಗೆ ಸ್ಪರ್ಧಾ ಮನೋಭಾವ ಬೆಳೆಸಿಕೊಳ್ಳಲು ಈ ರೀತಿಯ ಕಾರ್ಯಕ್ರಮಗಳು ಸಹಕಾರಿಯಾಗಲಿವೆ ಎಂದರು.
ಬಾಲಾಂಜನೇಯ ದೇವಸ್ಥಾನದ ಧರ್ಮದರ್ಶಿ ಬಾಬಾ ಶಂಕರ್ ಮಾತನಾಡಿದರು. ನಾಟ್ಯ ಮಯೂರಿ ನೃತ್ಯ ಶಾಲೆಯ ಸಂಸ್ಥಾಪಕಿ ವಿದೂಷಿ ಪ್ರೇಮಾಂಜಲಿ ಆಚಾರ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟಿಗಳಾದ ಲವೀನ್ ಲೋಪೇಸ್ ಹಾಗೂ ದೀಪಕ್ ಇದ್ದರು.
ಇದೇ ಸಂದರ್ಭ ನೃತ್ಯ ಶಾಲೆಯ ವಿದ್ಯಾರ್ಥಿಗಳ ಪೋಷಕರಿಗೆ ರಸಪ್ರಶ್ನೆ ಸ್ಪರ್ಧೆ ಏರ್ಪಡಿಸಲಾಗಿತ್ತು. ಶ್ರೀ ಕೃಷ್ಣ ಜನ್ಮಾಷ್ಠಮಿಯಂದು ಮಕ್ಕಳು ಮುದ್ದು ಕೃಷ್ಣ ಮತ್ತು ಗೋಪಿಕೆಯರ ವೇಷದಲ್ಲಿ ಕಂಗೊಳಿಸಿದರು. ಶ್ರೀ ಕೃಷ್ಣನ ವಿವಿಧ ಸನ್ನಿವೇಶಗಳನ್ನೊಳಗೊಂಡ ನೃತ್ಯ ಪ್ರದರ್ಶನವನ್ನು ನೀಡಿದರು.