

ದೇವದುರ್ಗ: ನಾರಾಯಣಪುರ ಬಲದಂಡೆ ನಾಲೆ ಜಾರಿಗೊಳಿಸಿದ್ದರಿಂದ ತಾಲೂಕಿನ ಮಿಯ್ಯಪುರ ಕ್ರಾಸ್‌ನಲ್ಲಿ ದೇವೇಗೌಡರ ಅಭಿಮಾನಿ, ರೈತ ಮಲ್ಲಣ್ಣ ಸಾಹುಕಾರ ನಾಗರಾಳ ಸ್ಥಾಪಿಸಿದ ದೇವೇಗೌಡರ ಪ್ರತಿಮೆಯನ್ನು ಶುಕ್ರವಾರ ಸ್ವತಃ ದೇವೇಗೌಡರೇ ಅನಾವರಣ ಮಾಡುವ ಮೂಲಕ ಅಭಿಮಾನಿ ಕನಸು ಈಡೇರಿಸಿದ್ದಾರೆ.
ದೇವೇಗೌಡರು ಬರದ ನಾಡಿಗೆ ನೀರಾವರಿ ಸೌಲಭ್ಯ ಕಲ್ಪಿಸಿದ್ದರಿಂದ ನಾಗರಾಳ ಗ್ರಾಮದ ರೈತ ಮಲ್ಲಣ್ಣ ಸಾಹುಕಾರ, ಅವರ ಅಭಿಮಾನಿಯಾಗಿ 25ಲಕ್ಷ ರೂ. ವೆಚ್ಚದಲ್ಲಿ 6.5ಅಡಿ ಎತ್ತರದ ಪ್ರತಿಮೆ ಮಾಡಿಸಿದ್ದಾರೆ. ರಾಜ್ಯ ಹೆದ್ದಾರಿ ಮಿಯ್ಯಪುರ ಕ್ರಾಸ್‌ನಲ್ಲಿ ಒಂದು ಗುಂಟೆ ಜಾಗದಲ್ಲಿ ವೃತ್ತಮಾಡಿ ದೇವೇಗೌಡರ ಪ್ರತಿಮೆ ಪ್ರತಿಷ್ಠಾಪಿಸಿದ್ದಾರೆ. ದೇವೇಗೌಡರಿಂದಲೇ ವೃತ್ತ ಉದ್ಘಾಟನೆ ಮಾಡಿಸಿ ಸಂಭ್ರಮಿಸಿದರು.
ನಾಗರಾಳದ ರೈತ ಮಲ್ಲಣ್ಣ ಸಾಹುಕಾರ ಹಲವು ವರ್ಷಗಳಿಂದ ಕೃಷಿ ಮಾಡುತ್ತಿದ್ದು ಬರದಿಂದ ತತ್ತರಿಸಿ ರೋಸಿಹೋಗಿದ್ದರು. 2003ರಲ್ಲಿ ಮಲ್ಲಣ್ಣ ಅವರದು ಸೇರಿ ತಾಲೂಕಿನ ಜಮೀನುಗಳಿಗೆ ನಾಲೆ ನೀರು ಹರಿದಿತ್ತು. ಅಂದೇ ದೇವೇಗೌಡರ ಪ್ರತಿಮೆ ಪ್ರತಿಷ್ಠಾಪಿಸುವ ಕನಸು ಕಂಡಿದ್ದರು.
22 ವರ್ಷಗಳ ನಂತರ ರೈತ ಅಭಿಮಾನಿ ಮಲ್ಲಣ್ಣ ಸಾಹುಕಾರ ಕನಸು ನನಸಾಗಿದೆ. ಇದಲ್ಲದೆ ತಾಲೂಕಿನ ಗಾಣಧಾಳ ಗ್ರಾಮದ ರೈತರು ಸೇರಿ ದೇವೇಗೌಡರ ಪ್ರತಿಮೆ ನಿರ್ಮಿಸಿದ್ದರು. 2022ರಲ್ಲಿ ದೇವದುರ್ಗಕ್ಕೆ ಬಂದಿದ್ದ ದೇವೇಗೌಡರು, ಅಂದು ತಮ್ಮ ಪ್ರತಿಮೆ ಉದ್ಘಾಟಿಸಿದ್ದರು. ಇದು ದೇವೇಗೌಡರ ಎರಡನೇ ಪ್ರತಿಮೆಯಾಗಿದೆ. ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಶಾಸಕಿ ಕರೆಮ್ಮ ಜಿ.ನಾಯಕ, ಸಂಸದ ಸುರೇಶಬಾಬು, ಮಾಜಿ ಸಚಿವ ವೆಂಕಟರಾವ್ ನಾಡಗೌಡ, ಬಂಡೆಪ್ಪ ಕಾಶೆಂಪುರ, ದೇವೇಗೌಡರ ಅಭಿಮಾನಿ ಮಲ್ಲಣ್ಣ ಸಾಹುಕಾರ ನಾಗರಾಳ ಇದ್ದರು.