ಮೈಸೂರು ಜಿಲ್ಲೆಯಲ್ಲಿ ಕ್ಷಾಮ: ನೀರಿಗಾಗಿ ಪರದಾಟ

Drinking Water
Published on

ಮಂಜುನಾಥ ತಿಮ್ಮಯ್ಯ ಮೈಸೂರು

ಕೆಆರ್‌ಎಸ್, ಕಬಿನಿ ಜಲಾಶಯ ಹೊಂದಿರುವ ಮೈಸೂರು ಜಿಲ್ಲೆಯಲ್ಲೂ ಜಲಕ್ಷಾಮ ಉಲ್ಬಣಿಸಿದೆ. ಜನ-ಜಾನುವಾರುಗಳಿಗೆ ಕುಡಿಯುವ ನೀರಿಗೂ ತತ್ವಾರ ಉಂಟಾಗಿದೆ.

ಬೇಸಿಗೆ ಪ್ರಖರತೆ ಹೆಚ್ಚಾಗುತ್ತಿದ್ದಂತೆ ಜಿಲ್ಲೆಯಲ್ಲೆಡೆ ನೀರಿನ ಹಾಹಾಕಾರವೂ ವ್ಯಾಪ್ತಿಸುತ್ತಿದೆ. ನಗರ, ಪಟ್ಟಣ ಪ್ರದೇಶಗಳಿಗಿಂತ ಗ್ರಾಮಾಂತರ ಪ್ರದೇಶದಲ್ಲಿ ನೀರಿನ ಸಮಸ್ಯೆ ಹೆಚ್ಚಿದ್ದು, ಹಳ್ಳಿಗಾಡಿನ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಈ ನಡುವೆ ಕುಡಿಯುವ ನೀರಿನ ಸಮಸ್ಯೆ ನಿರ್ವಹಣೆಗೆ ಲೋಕಸಭಾ ಚುನಾವಣೆ ಅಡ್ಡಿಯಾಗಿದೆ. ಅಧಿಕಾರಿಗಳು, ಸಿಬ್ಬಂದಿಗೆ ಎಲೆಕ್ಷನ್ ಕೆಲಸ ಮೊದಲ ಆದ್ಯತೆಯಾಗಿದೆ. ನೀತಿ ಸಂಹಿತೆ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳೂ ಸೂಕ್ತ ಕ್ರಮ ವಹಿಸುವಂತಿಲ್ಲ. ಹೀಗಾಗಿ ಅಧಿಕಾರಿಗಳದ್ದೇ ಆಟವಾಗಿದೆ. ಕುಡಿಯುವ ನೀರು ಸೇರಿದಂತೆ ಇನ್ನಿತರ ಸಮಸ್ಯೆಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ. ಗ್ರಾಮೀಣ ಜನರ ನೀರಿನ ಸಮಸ್ಯೆ ಕೇಳುವವರಿಲ್ಲದಂತಾಗಿದೆ.

ಜನ-ಜಾನುವಾರುಗಳಿಗೆ ಕುಡಿಯುವ ನೀರು ಕಲ್ಪಿಸುವುದು ಮೊದಲ ಆದ್ಯತೆ ಆಗಬೇಕು. ಅದಕ್ಕಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿಗಳು ಸಮರ್ಪಕ ನೀರು ಪೂರೈಕೆಗೆ ಒತ್ತು ನೀಡಬೇಕು. ಸಮಸ್ಯೆ ಕಂಡು ಬಂದಿರುವ ಪ್ರದೇಶಗಳಿಗೆ ತ್ವರಿತಗತಿ ನೀರು ಪೂರೈಕೆಗೆ ಪರ್ಯಾಯ ವ್ಯವಸ್ಥೆ ಮಾಡಬೇಕು. ನೀರಿನ ಸಮಸ್ಯೆ ಪರಿಹರಿಸಲು ಅಧಿಕಾರಿಗಳಿಗೆ ಎಲೆಕ್ಷನ್ ನೆಪವಾಗದಿರಲಿ ಎಂಬುದು ಜನ ಆಗ್ರಹವಾಗಿದ್ದು, ಲೌಡ್‌ಸ್ಪೀಕರ್‌ನಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ.

ಮಾಲೀಕರೊಂದಿಗೆ ಒಪ್ಪಂದ


ಕುಡಿಯುವ ನೀರಿಗೆ ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಕುಡಿಯುವ ನೀರಿನ ಸಮಸ್ಯೆ ಆಗುವಂತಹ ಸಮಸ್ಯಾತ್ಮಕ ಪ್ರದೇಶಗಳು, ಗ್ರಾಮಗಳನ್ನು ಈಗಾಗಲೇ ಗುರುತಿಸಲಾಗಿದೆ. ಪ್ರತಿ ಗ್ರಾಮಕ್ಕೆ ಕಡ್ಡಾಯವಾಗಿ ಒಂದೊಂದು ಖಾಸಗಿ ಕೊಳವೆಬಾವಿ ಆಯ್ದುಕೊಂಡು ಅದರ ಮಾಲೀಕರೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.
ಡಾ.ಕೆ.ವಿ.ರಾಜೇಂದ್ರ
ಜಿಲ್ಲಾಧಿಕಾರಿ

ಮೇವು ಸಾಗಣೆಗೆ ನಿರ್ಬಂಧ


ಕುಡಿಯುವ ನೀರಿನ ಸಮಸ್ಯೆಗೆ ತಕ್ಷಣ ಸ್ಪಂದಿಸಲಾಗುತ್ತಿದೆ. ಹಾಡಿಗಳು ಸೇರಿದಂತೆ ಗ್ರಾಮಾಂತರ ಪ್ರದೇಶದಲ್ಲಿ ವಾಟರ್ ಟ್ಯಾಂಕರ್ ಮೂಲಕ ಜನರಿಗೆ ನೀರು ಪೂರೈಸಲಾಗುತ್ತಿದೆ. ಸ್ಥಳೀಯ ಸಂಸ್ಥೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು ಮಾಹಿತಿ ನೀಡಲು ಸಹಾಯವಾಣಿ ತೆರೆದು ಸಿಬ್ಬಂದಿ ನೇಮಕ ಮಾಡಲಾಗಿದೆ. ಬೇಸಿಗೆ ಸಮಯದಲ್ಲಿ ಕಂಡುಬರುವ ಸಾಂಕ್ರಾಮಿಕ ರೋಗಗಳ ತಡೆಗೂ ಕ್ರಮ ವಹಿಸಲಾಗಿದೆ. ಜಿಲ್ಲೆಯಲ್ಲಿ ಮೇವಿನ ಕೊರತೆಯೂ ಇಲ್ಲ. ಆದರೂ ಅನ್ಯ ಜಿಲ್ಲೆಗಳಿಗೆ ಮೇವು ಸರಬರಾಜಿಗೆ ನಿರ್ಬಂಧಿಸಲಾಗಿದೆ.
ಕೆ.ಎಂ.ಗಾಯತ್ರಿ ಸಿಇಒ, ಜಿಪಂ

ತಾಲೂಕಿನಲ್ಲಿ ಅಧಿಕ


ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಸೃಷ್ಟಿಯಾಗುತ್ತಿದೆ. ಮೈಸೂರು ತಾಲೂಕಿನಲ್ಲಿ ಇದು ಅಧಿಕವಾಗಿದೆ. ಮುಂದಿನ ದಿನಗಳಲ್ಲಿ ನೀರಿನ ಕೊರತೆ ಇನ್ನಷ್ಟು ಹೆಚ್ಚಾಗಲಿದೆ. ಜನರಿಗೆ ಕುಡಿಯುಲು ನೀರು ಕೊಟ್ಟರೆ ಸಾಕಾಗಿದೆ. ಇನ್ನೂ ಒಣಗುತ್ತಿರುವ ಬೆಳೆಗಳಿಗೆ ನೀರು ಸಿಗುವುದು ಕಷ್ಟಕರವಾಗಿದೆ. ಅಧಿಕಾರಿಗಳು ತ್ವರಿತಗತಿಯಲ್ಲಿ ಸಮಸ್ಯೆಗೆ ಸ್ಪಂದಿಸಬೇಕು.
ಪಿ.ಮರಂಕಯ್ಯ
ರೈತ ಮುಖಂಡ

ಮಳೆ ಕೊಯ್ಲು ಅಳವಡಿಕೆಯಾಗಲಿ


ಮಳೆ ನೀರನ್ನು ವೈಜ್ಞಾನಿಕ, ಸಾಂಪ್ರದಾಯಿಕ ರೀತಿಯಲ್ಲಿ ಸಂಗ್ರಹಿಸುವ, ಶೇಖರಿಸಿ ಬಳಸುವ, ಇಂಗಿಸುವ ಪ್ರಕ್ರಿಯೆ ಆಗಬೇಕು. ಜತೆಗೆ ಮಳೆ ನೀರು ಕೊಯ್ಲು ಪದ್ಧತಿಯನ್ನು ನಗರ, ಪಟ್ಟಣ ವ್ಯಾಪ್ತಿಯ ಎಲ್ಲ ಕಟ್ಟಡಗಳಿಗೆ ಕಡ್ಡಾಯಗೊಳಿಸಬೇಕು. ಆದ್ದರಿಂದ ಪ್ರತಿ ಮನೆ, ಸರ್ಕಾರಿ, ವಾಣಿಜ್ಯ ಕಟ್ಟಡ ಈ ಪದ್ಧತಿ ಅಳವಡಿಕೆ ಮಾಡದಿದ್ದರೆ ಕಟ್ಟಡ ಪೂರ್ಣಗೊಂಡ ಪ್ರಮಾಣಪತ್ರ(ಸಿಸಿ) ವಿತರಣೆಗೆ ನಿರ್ಬಂಧ ವಿಧಿಸಬೇಕು.
ಎಂ.ಅನಿಲ್‌ಕುಮಾರ್
ನಗರ ನಿವಾಸಿ

ಇತಿಮಿತಯಾಗಿ ಬಳಕೆ ಅವಶ್ಯ


ಪಕ್ಷಿಗಳು, ಜಾನುವಾರುಗಳಿಗೂ ನೀರಿನ ಸಮಸ್ಯೆ ಉಂಟಾಗುತ್ತಿದೆ. ಈ ನಿಟ್ಟಿನಲ್ಲಿ ಕುಡಿಯುವ ನೀರು ಕಲ್ಪಿಸಲು ನೀರಿನ ಹೊಂಡ, ತೊಟ್ಟಿಗಳು ಸೇರಿದಂತೆ ಪರ್ಯಾಯ ವ್ಯವಸ್ಥೆ ಮಾಡಬೇಕು. ಇದನ್ನು ಸರ್ಕಾರಿ ಸಂಸ್ಥೆಗಳಷ್ಟೇ ಅಲ್ಲ, ಜನರು ಸಹ ಮಾಡಬೇಕು. ಜತೆಗೆ ನೀರನ್ನು ಇತಿಮಿತಯಾಗಿ ಬಳಕೆ ಮಾಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ನೀರಿಗೆ ಚಿನ್ನದ ಬೆಲೆ ಬಂದರೂ ಆಶ್ಚರ್ಯವಿಲ್ಲ. ನೀರಿನ ಮಿತ ಬಳಕೆ ಕುರಿತು ಜನಜಾಗೃತಿ ಮೂಡಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಬೇಕು. ಇದು ಒಂದು ಚಳವಳಿ ಸ್ವರೂಪ ಪಡೆಯಬೇಕು.
ಸಾಗರ ಸುರೇಶ್
ವನ್ಯಜೀವಿ ಛಾಯಾಗ್ರಾಹಕ

ಪೋಲು ತಡೆಗೆ ಮುಂದಾಗಲಿ


ನೀರಿನ ಪೋಲು ತಡೆಯುವಲ್ಲಿ ಸಾರ್ವಜನಿಕರ ಪಾತ್ರವೂ ಇದೆ. ನೀರು ತುಂಬಿಕೊಂಡ ನಂತರ ನಲ್ಲಿ ಬಂದ್ ಮಾಡಲ್ಲ. ಕೆಲವರ ಮನೆಯ ನಲ್ಲಿ ಬಂದ್ ಮಾಡುವುದೇ ಇಲ್ಲ. ಬಿಂದಿಗೆ, ಬಕೆಟ್ ಇಟ್ಟು ನಲ್ಲಿ ತೆರೆದು ಹೋಗುವ ಕೆಟ್ಟ ಪ್ರವೃತ್ತಿ ನಾಗರಿಕರು ಕೈಬಿಡಬೇಕು. ಕಾರ್, ಬೈಕ್ ಸೇರಿದಂತೆ ಇನ್ನಿತರ ವಾಹನಗಳನ್ನು ತೊಳೆಯಲು ಪೈಪ್ ಹಿಡಿದು ನೀರು ಬಳಕೆ ಮಾಡುವುದನ್ನೂ ನಿಲ್ಲಿಸಬೇಕು. ಇದರಿಂದ ಬಹಳಷ್ಟು ನೀರು ವ್ಯರ್ಥವಾಗುತ್ತಿದೆ. ನೀರಿನ ಬಳಕೆ ಕುರಿತು ಅರಿವಿನ ಜ್ಯೋತಿ ಪ್ರತಿ ಮನೆಯಲ್ಲಿ ಮೂಡಬೇಕು.
ಎ.ವಿ.ಕಾರ್ತೀಕ್
ಪರಿಸರ ಪ್ರೇಮಿ

ತುರ್ತು ತಂಡ ರಚಿಸಲಿ


ಗ್ರಾಮಾಂತರ ಪ್ರದೇಶದಲ್ಲಿ ನೀರಿನ ಸಮಸ್ಯೆಯಿಂದ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಚುನಾವಣಾ ಕೆಲಸದ ಜತೆಗೆ ಅಧಿಕಾರಿಗಳು ಜನ-ಜಾನುವಾರುಗಳ ನೀರಿನ ದಾಹ ತೀರಿಸುವ ಕೆಲಸವನ್ನು ಆದ್ಯತೆ ಮೇರೆಗೆ ಮಾಡಬೇಕು. ಸಿರಿವಂತರು ಮತ್ತು ಮಧ್ಯವರ್ಗದವರು ನೀರಿನ ಸಮಸ್ಯೆಯಾದಾಗ ಟ್ಯಾಂಕರ್ ಮೂಲಕ ನೀರು ತರಿಸಿಕೊಳ್ಳುತ್ತಿದ್ದಾರೆ. ಬಡವರು ಮತ್ತು ಇಲ್ಲದವರು ನೀರಿಗಾಗಿ ಪರದಾಡುತ್ತಾರೆ. ಆದ್ದರಿಂದ ನಗರ ವ್ಯಾಪ್ತಿಯಲ್ಲಿ ಅಲಂಕಾರಿಕ ಗಿಡಗಳು ಮತ್ತು ಲಾನ್‌ಗೆ ವಿಪರೀತ ನೀರಿನ ಬಳಕೆಗೆ ಕಡಿವಾಣ ಹಾಕಬೇಕು. ನೀರಿನ ಪೋಲು ತಡೆಗಾಗಿ, ದುರಸ್ತಿಗಾಗಿ ತುರ್ತು ತಂಡ ರಚನೆಗೆ ಕ್ರಮ ಕೈಗೊಳ್ಳಬೇಕು.
ರವಿಕುಮಾರ್
ಬೆಟ್ಟದಪುರ ನಿವಾಸಿ

ಬೇಸಿಗೆ ಕಾಲದಲ್ಲಿ ಹೆಚ್ಚಿನ ನೀರಿನ ಅಗತ್ಯ ಇದೆ. ಆದರೆ ಸರಿಯಾಗಿ ನೀರು ಪುರೈಕೆಯಾಗುತ್ತಿಲ್ಲ. ದಿನ ಬಿಟ್ಟು ದಿನ ನೀರು ಸರಬರಾಜಾಗುತ್ತಿದೆ. ಅದು ಕೂಡ ಸಾಕಾಗುವಷ್ಟು ಸಿಗುತ್ತಿಲ್ಲ. ಇದರಿಂದ ಹನಿ ನೀರಿಗೂ ಪರದಾಡುವಂತಾಗಿದೆ. ಮುಂದಿನ ದಿನಗಳಲ್ಲಿ ಇದು ದೊಡ್ಡ ಗೋಳಾಗಲಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು.
ಎಚ್.ಡಿ.ಶ್ರುತಿ
ಗೃಹಿಣಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net