ಕರೊನಾ ಗೆದ್ದು ಬಂದ ಕೋಟದ ಕುಟುಂಬ

covid
Published on

ಕೋಟ: ಗ್ರಾಮೀಣ ಭಾಗ ಕೋಟದಲ್ಲಿಯೂ ಕರೊನಾ ಸೋಂಕು ವ್ಯಾಪಕ ಪಸರಿಸಿದೆ. ಇಲ್ಲಿನ ದಿನಸಿ ಅಂಗಡಿ ಮಾಲೀಕರ ಕುಟುಂಬದ ಏಳು ಮಂದಿಗೆ ಸೋಂಕು ತಗುಲಿದ್ದು, ನಾಲ್ಕು ತಿಂಗಳ ಮಗು ಹಾಗೂ 85ರ ಹರೆಯದ ಹಿರಿಯ ಮಹಿಳೆ ಸಹಿತ ಎಲ್ಲರೂ ಗುಣ ಹೊಂದಿದ್ದು, ಕರೊನಾ ಬಗ್ಗೆ ಭೀತಿ ಬೇಡ ಎಂಬ ಸಂದೇಶ ಸಾರಿದ್ದಾರೆ.

ಇದೇ ಪರಿಸರದ ಹೋಟೆಲ್ ಮಾಲೀಕರೊಬ್ಬರು ಪಾಸಿಟಿವ್ ಆದ ಬಳಿಕ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಾಗಿ ಯಾರೂ ಈ ಸೋಂಕಿಗೆ ಭೀತಿ ಪಡಬೇಡಿ ಎಂಬ ವಿಡಿಯೋ ಹಾಗೂ ಹಾಡೊಂದಕ್ಕೆ ನರ್ತಿಸಿರುವ ವಿಡಿಯೋ ಸಂದೇಶ ವ್ಯಾಪಕವಾಗಿ ಪಸರಿಸಿತ್ತು. ಅದರಂತೆ ದಿನಸಿ ಅಂಗಡಿ ಮಾಲೀಕರ ಕುಟುಂಬದವರು ಮನೆಯಲ್ಲಿ ಕುಳಿತು ‘ಕರೊನಾ ವೈರಸ್ ಎದುರು ಭಯಪಡಬೇಕಾಗಿಲ್ಲ ಅದೊಂದು ಇಲಿ ತರಹ. ಅದನ್ನು ಹುಲಿಯಾಗಿ ಬಿಂಬಿಸಲಾಗಿದೆಯಷ್ಟೇ’ ಎಂದು ಹೇಳಿರುವ ವಿಡಿಯೋ ಸಂದೇಶ ವಾಟ್ಸಾೃಪ್, ಫೇಸ್‌ಬುಕ್ ಮೂಲಕ ಪಸರಿಸಿದೆ. ತಮಗೆ ಚಿಕಿತ್ಸೆ ನೀಡಿದ ವೈದ್ಯರು, ಕರೊನಾ ವಾರಿಯರ್ಸ್‌ಗೆ ಕುಟುಂಬ ವಿಡಿಯೋದಲ್ಲಿ ಕೃತಜ್ಞತೆ ಸಲ್ಲಿಸಿದೆ. ಈ ಕುಟುಂಬದ ಏಳು ಮಂದಿಯಲ್ಲದೆ ಅಂಗಡಿಯಲ್ಲಿನ ಇಬ್ಬರು ನೌಕರಿಗೂ ಪಾಸಿಟಿವ್ ಬಂದಿದ್ದು, ಅವರೂ ರೋಗ ಮುಕ್ತರಾಗಿದ್ದಾರೆ.

ಇಬ್ಬರನ್ನು ಬಿಟ್ಟಿದ್ದ ಕರೊನಾ!: ಒಂದೇ ಮನೆಯ ಏಳು ಮಂದಿಗೆ ಪಾಸಿಟಿವ್ ಬಂದರೂ ಮನೆಯ ಯಜಮಾನ, ದಿನಸಿ ಅಂಗಡಿ ಮಾಲೀಕ ರಮೇಶ್ ಪ್ರಭು ಮತ್ತು ಮೊಮ್ಮಗಳು 5 ವರ್ಷದ ಬಾಲಕಿಗೆ ನೆಗೆಟಿವ್ ಬಂದಿತ್ತು. ನಾಲ್ಕು ತಿಂಗಳ ಹಸುಗೂಸು ಸಹಿತ ಕುಟುಂಬದ ಎಲ್ಲರೂ ಆಸ್ಪತ್ರೆಯಲ್ಲಿದ್ದ ವೇಳೆ ಮನೆಯಲ್ಲಿ ಮೊಮ್ಮಗಳನ್ನು ನೋಡಿಕೊಂಡ ದಿನಗಳನ್ನು ಪ್ರಭು ನೆನಪಿಸಿಕೊಳ್ಳುತ್ತಾರೆ. ಕರೊನಾ ಕುರಿತು ಯಾರೂ ಭಯಗೊಳಿಸುವಂಥ ಪ್ರಚಾರ ಮಾಡಬೇಡಿ, ಅದೊಂದು ಮಳೆಗಾಲದಲ್ಲಿ ಬರುವ ಜ್ವರ ಶೀತದ ಲಕ್ಷಣವಿರುವ ವೈರಲ್ ಫೀವರ್. ಅದನ್ನು ಕರೊನಾ ಎಂದು ಜನರಲ್ಲಿ ಭಯ ಹುಟ್ಟಿಸಲಾಗುತ್ತಿದೆ ಎಂದು ಸಾಮಾಜಿಕ ಜಾಲತಾಣಗಳ ಬಗ್ಗೆ ಬೇಸರ ವ್ಯಕ್ತಪಡಿಸುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net