

ಗೋಪಾಲಕೃಷ್ಣ ಪಾದೂರು ಉಡುಪಿ
ಜಿಲ್ಲೆಯಲ್ಲಿ ಕೌಟುಂಬಿಕ ದೌರ್ಜನ್ಯ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದೆ. 2017-18ನೇ ಸಾಲಿನಲ್ಲಿ 62 ದೂರುಗಳು ದಾಖಲಾಗಿದ್ದರೆ, 2019-20ರಲ್ಲಿ 39ಕ್ಕೆ ಇಳಿಕೆಯಾಗಿದೆ. ಇದರಲ್ಲೂ 21 ಪ್ರಕರಣಗಳು ಇತ್ಯರ್ಥವಾಗಿವೆ.
ವ್ಯಕ್ತಿಯ ಮೇಲೆ ದೈಹಿಕ, ಮಾತಿನ ಮೂಲಕ ಮಾನಸಿಕ ಹಿಂಸೆಯನ್ನು ಕೌಟುಂಬಿಕ ದೌರ್ಜನ್ಯ ಎನ್ನಲಾಗುತ್ತದೆ. ಇದರಿಂದ ಬಳಲುತ್ತಿರುವವರಲ್ಲಿ ಮಹಿಳೆಯರೇ ಅಧಿಕ ಸಂಖ್ಯೆಯಲ್ಲಿದ್ದಾರೆ. ಭಾರತದಲ್ಲಿ ಕೌಟುಂಬಿಕ ದೌರ್ಜನ್ಯಗಳು ಹೆಚ್ಚುತ್ತಿರುವ ಬಗ್ಗೆ ಸರ್ಕಾರ 2005ರಲ್ಲಿ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ ಜಾರಿಗೆ ತಂದಿದ್ದು, ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗಾಗಿ ವಿಶೇಷ ಕಾನೂನು ನೆರವು ನೀಡಲಾಗುತ್ತದೆ.
ಸಖಿ ಸೆಂಟರ್ ಸ್ಥಾಪನೆ
ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಸಖಿ ಸೆಂಟರ್, ಸಾಂತ್ವನ ಕೇಂದ್ರಗಳ ಮೂಲಕ ಸಮಸ್ಯೆ ನಿವಾರಿಸುವ ಕೆಲಸ ಮಾಡಲಾಗುತ್ತಿದೆ. ಲೈಂಗಿಕ ಹಾಗೂ ಮಾನಸಿಕ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಒಂದೇ ಸೂರಿನಡಿ ಸಖಿ ಒನ್ ಸೆಂಟರ್ ಮೂಲಕ ಮಾಹಿತಿ ನೀಡಲಾಗುತ್ತಿದೆ. ಅಲ್ಲದೆ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಒಂದೇ ಕಡೆ ಆರೋಗ್ಯ, ಕಾನೂನು, ವಸತಿ ಮತ್ತು ರಕ್ಷಣೆ ಒದಗಿಸುವ ನಿಟ್ಟಿನಲ್ಲಿ ಸಖಿ ಒನ್ ಸ್ಟಾಪ್ ಸೆಂಟರ್ ನಿಟ್ಟೂರಿನಲ್ಲಿ ಕಾರ್ಯನಿರ್ವಹಿಸುತ್ತಿದೆ.
ಪುರುಷರ ಮೇಲೂ ದೌರ್ಜನ್ಯ ಕೌಟುಂಬಿಕ ದೌರ್ಜನ್ಯ ಪ್ರಕರಣಗಳು ಮಹಿಳೆಯರ ಮೇಲೆಯೇ ನಡೆಯುತ್ತದೆ ಎಂದು ಭಾವಿಸುವಂತಿಲ್ಲ. ಮಹಿಳೆಯರೂ ಪುರುಷರಿಗೆ ಕಿರುಕುಳ ನೀಡಿದ ದೂರುಗಳು ಕೌಟುಂಬಿಕ ನ್ಯಾಯಾಲಯಗಳಿಗೆ ಸಲ್ಲಿಕೆಯಾಗುತ್ತಿವೆ. ದೌರ್ಜನ್ಯ ನಡೆಸದಿದ್ದರೂ ಜೀವನಾಂಶಕ್ಕಾಗಿ ದೌರ್ಜನ್ಯದ ಆರೋಪ ಹೊರಿಸುವ ಘಟನೆಗಳೂ ಜಿಲ್ಲೆಯಲ್ಲಿ ನಡೆದಿವೆ. ಆದರೆ ಪುರುಷರ ಮೇಲಿನ ದೌರ್ಜನ್ಯ ತಡೆಯಲು ಸೂಕ್ತ ಕಾನೂನು ಇಲ್ಲದ ಕಾರಣ ಪ್ರಕರಣ ಬೆಳಕಿಗೆ ಬರುತ್ತಿಲ್ಲ. 2016-17ನೇ ಸಾಲಿನಲ್ಲಿ 40 ಪ್ರಕರಣ, 2017-18ರಲ್ಲಿ 62, 2018-19ರಲ್ಲಿ 67 ಪ್ರಕರಣಗಳು ದಾಖಲಾಗಿವೆ. 2019-20ರವರೆಗೆ ದಾಖಲಾದ ಪ್ರಕರಣಗಳ ಸಂಖ್ಯೆ 39. ಈ ಪೈಕಿ 2016-17ನೇ ಸಾಲಿನಲ್ಲಿ 11, 2017-18ನೇ ಸಾಲಿನಲ್ಲಿ 17, 2018-19ನೇ ಸಾಲಿನಲ್ಲಿ 10 ಪ್ರಕರಣಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಒಟ್ಟು 190 ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿವೆ. 2007ರಿಂದ 19ರವರೆಗೆ ಜಿಲ್ಲೆಯಲ್ಲಿ ಒಟ್ಟು 358 ಪ್ರಕರಣಗಳು ದಾಖಲಾಗಿವೆ. 2019-20ನೇ ಸಾಲಿನಲ್ಲಿ ಒಟ್ಟು 39 ಪ್ರಕರಣಗಳು ದಾಖಲಾಗಿದ್ದು, 21 ಪ್ರಕರಣಗಳು ಇತ್ಯರ್ಥವಾಗಿವೆ. 14 ಪ್ರಕರಣಗಳು ವಿಚಾರಣೆ ಹಂತದಲ್ಲಿದ್ದು 4 ಪ್ರಕರಣಗಳು ನ್ಯಾಯಾಲಯದಲ್ಲಿ ಬಾಕಿಯಿವೆ.
ಕೌಟುಂಬಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿಇಲಾಖೆಯಿಂದ ಕೌನ್ಸೆಲಿಂಗ್ ನಡೆಯುತ್ತಿವೆ. ಸಾಂತ್ವನ ಕೇಂದ್ರಗಳ ಮೂಲಕ ಅಧಿಕಾರಿಗಳು ದೌರ್ಜನ್ಯಕ್ಕೊಳಗಾದವರೊಂದಿಗೆ ಚರ್ಚಿಸಿ ಪ್ರಕರಣ ಇತ್ಯರ್ಥಪಡಿಸಲು ಯತ್ನಿಸುತ್ತಾರೆ. ಗಂಭೀರ ಪ್ರಕರಣಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುತ್ತದೆ. ಶೇಷಪ್ಪ, ಉಪನಿರ್ದೇಶಕ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ