ಮೈಸೂರು: ಒಬ್ಬ ಮಹಿಳೆ ಸಮಾಜದ ಎಲ್ಲ ಕಟ್ಟುಪಾಡುಗಳಿಂದ ಆಚೆ ಬಂದು ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಬೇಕಾದರೂ ಕುಟುಂಬದ ಬೆಂಬಲ ಅತಿಮುಖ್ಯ ಎಂದು ಡಿಆರ್‌ಸಿ ಸಿನಿಮಾಸ್ ಮ್ಯಾನೇಜಿಂಗ್ ಪಾರ್ಟ್ನರ್ ವೈಶಾಲಿ ಹನುಮಂತ್ ಅಭಿಪ್ರಾಯಪಟ್ಟರು.
ದಿ ಇನ್‌ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್(ಇಂಡಿಯಾ) ಮೈಸೂರು ಘಟಕದಿಂದ ಇಂಜಿನಿಯರ್‌ಗಳ ಸಭಾಂಗಣದಲ್ಲಿ ಶನಿವಾರ ‘ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ‘ಮಹಿಳಾ ಉದ್ಯಮಶೀಲತೆ ಮತ್ತು ಸಬಲೀಕರಣ ಪ್ರಾಮುಖ್ಯತೆ ವಿಷಯ ಕುರಿತು ಮಾತನಾಡಿದರು.
ಉದ್ಯಮ ಬೆಳೆಸುವ ಸಂದರ್ಭದಲ್ಲಿ ಮಾರುಕಟ್ಟೆ ಏರಿಳಿತ, ಹಣಕಾಸಿನ ತೊಂದರೆ, ಕುಟುಂಬದಲ್ಲಿ ಸಾಂಸಾರಿಕ ಜಂಜಾಟದ ನಡುವೆ ಉದ್ಯಮದಲ್ಲಿ ತೊಡಗಿಸಿಕೊಂಡು ಸಕ್ಸಸ್ ಆಗುವುದು ಸುಲಭದ ಮಾತಲ್ಲ. ಉದ್ಯಮ ಕ್ಷೇತ್ರದಲ್ಲಿ ಮಹಿಳೆ ತೊಡಗಿಸಿಕೊಳ್ಳಬೇಕಾದರೆ, ಪುರುಷರ ಬೆಂಬಲ, ಸಮಾಜದ ಬೆಂಬಲ ಹಾಗೂ ಹಣಕಾಸಿನ ಭದ್ರತೆ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಉದ್ಯಮದಲ್ಲಿ ನಾವು ಎಷ್ಟೇ ಎತ್ತರಕ್ಕೆ ಏರಿದರೂ, ನಮ್ಮ ಬೆನ್ನಿಗೆ ಕುಟುಂಬದ ಸದಸ್ಯರು ನಿಲ್ಲಬೇಕು. ಆಗ ಧೈರ್ಯದಿಂದ ವ್ಯವಹಾರ ನಡೆಸಲು ಸಾಧ್ಯ. ಕುಟುಂಬದ ಬೆಂಬಲವಿಲ್ಲದೆ ಮಹಿಳೆಯರು ಯಾವುದೇ ಸಾಧನೆಯನ್ನು ಮಾಡಲು ಸಾಧ್ಯವಿಲ್ಲ ಎಂದು ತಾವು ಉದ್ಯಮದಲ್ಲಿ ತೊಡಗಿಸಿಕೊಂಡ ಸನ್ನಿವೇಶಗಳನ್ನು ವಿವರಿಸಿದರು.
ದಿ ಇನ್‌ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್(ಇಂಡಿಯಾ) ಮೈಸೂರು ಘಟಕದ ಅಧ್ಯಕ್ಷ ಡಾ.ಆರ್.ದೀಪು, ಕಾರ್ಯದರ್ಶಿ ಡಾ.ಎಸ್.ಎ.ಮೋಹನ ಕೃಷ್ಣ, ಸಂಚಾಲಕರಾದ ಅನಿತಾ ವೆಂಕಟೇಶ, ಕೆ.ಆರ್.ವಿದ್ಯಾಶ್ರೀ ಇತರರು ಇದ್ದರು.