

ಲಿಂಗಸುಗೂರು: ವಿಶ್ವದ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಭಾರತವೂ ಒಂದಾಗಿದ್ದು, ಅಭಿವೃದ್ಧಿ ಹೊಂದಿದ ಭಾರತದ ಹೊಸ ಗುರುತಿಗಾಗಿ ಕುಟುಂಬ ಯೋಜನೆ ವಿಧಾನವನ್ನು ದಂಪತಿ ಅಳವಡಿಸಿಕೊಳ್ಳಬೇಕೆಂದು ಮುಖ್ಯ ವೈದ್ಯಾಧಿಕಾರಿ ರುದ್ರಗೌಡ ಪಾಟೀಲ್ ಹೇಳಿದರು.
ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಆರೋಗ್ಯ ಇಲಾಖೆಯಿಂದ ಹಮ್ಮಿಕೊಂಡಿದ್ದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದರು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಪಾಲಕರು ಶ್ರಮಿಸುತ್ತಿದ್ದು, ಚಿಕ್ಕ ಕುಟುಂಬ-ಚೊಕ್ಕ ಕುಂಟುಬ, ಚಿಕ್ಕ ಕುಟುಂಬ-ಸುಖೀ ಕುಟುಂಬ ಎಂಬ ಘೋಷವಾಕ್ಯವನ್ನು ಎಲ್ಲ ದಂಪತಿ ಅನುಸರಿಸಿದರೆ ಮಕ್ಕಳ ಭವಿಷ್ಯ ರೂಪಿಸಲು ಸಾಧ್ಯವಾಗಲಿದೆ. ಹೆಣ್ಣಿರಲಿ, ಗಂಡಿರಲಿ ನಾವಿಬ್ಬರು ನಮಗಿಬ್ಬರು ಎಂಬ ಘೋಷ ವಾಕ್ಯ ಪಾಲಿಸಬೇಕು. ಆರೋಗ್ಯ ಸುರಕ್ಷತಾ ಕ್ರಮಗಳ ಮಾಹಿತಿ ಮತ್ತು ಕುಟುಂಬ ಕಲ್ಯಾಣ ಸೇವೆ ಪಡೆಯಬೇಕೆಂದು ಹೇಳಿದರು.