ಕುಟುಂಬದ ಸಂಬಂಧ ಬಲಗೊಳಿಸಲು ಫ್ಯಾಮಿಲಿ ಸಂಗಮ

mdg 1 (1)
Published on

ಮೂಡಿಗೆರೆ: ಆಧುನಿಕತೆ ಭರಾಟೆಯಲ್ಲಿ ಕುಟುಂಬಗಳನ್ನು ಮರೆತು ಬಿಡುವ ಕಾಲ ಬಂದಿದ್ದು, ಕುಟುಂಬದ ಸದಸ್ಯರನ್ನು ಪರಸ್ಪರ ಪರಿಚಯ ಮಾಡುವ ಸಲುವಾಗಿ ಬ್ಯಾರಿ ಫ್ಯಾಮಿಲಿ ಸಂಗಮ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕರ್ನಾಟಕ ಬ್ಯಾರಿ ಅಕಾಡೆಮಿ ಮಾಜಿ ಅಧ್ಯಕ್ಷ ಕೆ.ಮಹಮ್ಮದ್ ಹೇಳಿದರು.

ಬಿದರಹಳ್ಳಿ ಗ್ರಾಮದ ಕ್ಯಾಪ್ರಿ ರೆಸಾರ್ಟ್‌ನಲ್ಲಿ ಜಿಲ್ಲಾ ಬ್ಯಾರಿ ಒಕ್ಕೂಟ ಮತ್ತು ಮಲೆನಾಡು ಗಲ್ಫ್ ಎಜುಕೇಷನ್ ಟ್ರಸ್ಟ್ ನಿಂದ ಮಂಗಳವಾರ ನಡೆದ ಬ್ಯಾರಿ ಫ್ಯಾಮಿಲಿ ಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿ, ಆಧುನಿಕತೆ ಭರಾಟೆಗೆ ಸಿಲುಕಿರುವ ಜನ ಮೊಬೈಲ್, ಕಂಪ್ಯೂಟರ್ ಮತ್ತು ಟಿವಿ ಮೊರೆ ಹೋಗಿದ್ದಾರೆ. ಅಣ್ಣ-ತಮ್ಮ, ಅಕ್ಕ-ತಂಗಿಯರ ಪರಿಚಯ ಮರೆತು ಬಿಡುವ ಕಾಲ ಬಂದಿದೆ. ಇಂತಹ ಸನ್ನಿವೇಶ ಬರುತ್ತದೆ ಎಂದು ಯಾರೊಬ್ಬರು ಊಹಿಸಿರಲಿಲ್ಲ. ಕುಟುಂಬದೊಳಗಿನ ಸಂಬಂಧ ಗಟ್ಟಿಗೊಳಿಸಬೇಕು. ಎಲ್ಲ ಧರ್ಮದಲ್ಲಿ ಸಂಘಟನೆಗಳು ಕೂಡ ಫ್ಯಾಮಿಲಿ ಸಂಗಮ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಹಾಗಾದರೆ ಮಾತ್ರ ಸಂಬಂಧಗಳು ಉಳಿಯಲು ಸಾಧ್ಯವಿದೆ ಎಂದು ತಿಳಿಸಿದರು.

ಮಲೆನಾಡು ಗಲ್ಫ್ ಎಜುಕೇಷನ್ ಟ್ರಸ್ಟ್ ರಾಷ್ಟ್ರೀಯ ಅಧ್ಯಕ್ಷ ಅಕ್ರಂ ಹಾಜಿ ಮಾತನಾಡಿ, ಗಲ್ಫ್ ರಾಷ್ಟ್ರಗಳಲ್ಲಿರುವ ಉದ್ಯೋಗಿಗಳು ಮತ್ತು ಭಾರತೀಯರು ಒಂದಾಗಿ ಟ್ರಸ್ಟ್ ರಚಿಸಲಾಗಿದೆ. ಇದರಲ್ಲಿ ಬಡವರ ಕಣ್ಣೀರೊರೆಸುವ ಹಲವು ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಮೊದಲ ಆದ್ಯತೆ ನೀಡಲಾಗಿದೆ. ಉನ್ನತ ಶಿಕ್ಷಣ ಪಡೆಯುವ ಬಡ ಕುಟುಂಬದ ವಿದ್ಯಾರ್ಥಿಗಳಿಗೆ ನೆರವು, ದೀರ್ಘಕಾಲ ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಸಹಾಯ ಮಾಡಲು ಟ್ರಸ್ಟ್ ಸದಸ್ಯರು ಹಗಲಿರುಳು ದುಡಿಯುತ್ತಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net