

ಬೆಳಗಾವಿ: ಕುಟುಂಬದ ಇತಿಹಾಸ, ಗೌರವದ ಪ್ರತೀಕವಾದ ಮನೆತನದ ಹೆಸರು ಮನೆಯ ಆಸ್ತಿಗೇ ಮುಳುವಾದ ವ್ಯಥೆಯ ಕತೆಯಿದು! ಸವದತ್ತಿ ತಾಲೂಕಿನ ಚಿಕ್ಕ ಉಳ್ಳಿಗೇರಿ ಗ್ರಾಮದಲ್ಲಿ ‘ಹಳ್ಳದ’ ಎಂಬ ಮನೆತನವಿದೆ. ಆದರೆ ಈ ಹಳ್ಳದ ಎಂಬ ಹೆಸರನ್ನೇ ಹಳ್ಳ ಎಂದು ತಪ್ಪಾಗಿ ಅರ್ಥೈಸಿಕೊಂಡ ಅಧಿಕಾರಿಗಳು ಸುಮಾರು 300 ಎಕರೆ ಜಮೀನನ್ನು ಸರ್ಕಾರಿ ಜಮೀನೆಂದು ದಾಖಲಿಸಿಕೊಂಡಿದ್ದಾರೆ.
ಬೆಳೆ ಪರಿಹಾರ ಸಮೀಕ್ಷೆ ಕೈಗೊಂಡ ವೇಳೆ ಹೆಸರು ದಾಖಲಿಸುವ ಸಂದರ್ಭದಲ್ಲಿ ಈ ಎಡವಟ್ಟು ನಡೆದಿದೆ. ಅಧಿಕಾರಿಗಳು ‘ಹಳ್ಳದ’ ಎಂಬ ಅಡ್ಡ ಹೆಸರನ್ನು ಹಳ್ಳ ಎಂದು ಪರಿಗಣಿಸಿ ಜಮೀನು ಪಹಣಿ ಪತ್ರಲ್ಲೂ ‘ಹಳ್ಳದ ಜಾಗ’ ಎಂದು ದಾಖಲಿಸಿದ್ದಾರೆ. ಅಧಿಕಾರಿಗಳ ಸಮೀಕ್ಷೆ ಪೂರ್ಣಗೊಂಡ ಬಳಿಕ ಪಹಣಿ ಪತ್ರದಲ್ಲಿ ಜಮೀನು ಕೈತಪ್ಪಿರುವುದನ್ನು ಗಮನಿಸಿದ ಕುಟುಂಬ ಬೆಚ್ಚಿಬಿದ್ದಿದೆ. ಕಾರಣ ತಿಳಿಯಲು ಹೊರಟಾಗ ಇದು ‘ಹಳ್ಳದ’ ಹೆಸರಿನಿಂದಾದ ಎಡವಟ್ಟೆಂಬುದು ಖಚಿತವಾಗಿದೆ.
ಭೂಮಿಯನ್ನು ವಾಪಸ್ ಕೊಡಿಸಬೇಕೆಂಬ ಬೇಡಿಕೆ ಮುಂದಿಟ್ಟುಕೊಂಡ ಈ ಕುಟುಂಬದ ರೈತರು ಜಿಲ್ಲಾಡಳಿತದ ಮೊರೆ ಹೋಗಿದ್ದಾರೆ. ಮೈಲಾರ ಹಳ್ಳದ, ನಾಗಪ್ಪ ಹಳ್ಳದ, ಬಸಪ್ಪ ಹಳ್ಳದ, ಎ.ವೈ. ಹಳ್ಳದ, ಎಂ.ಕೆ. ಹಳ್ಳದ, ವೈ.ಎಸ್. ಹಳ್ಳದ, ಎಂ.ಎಸ್. ಹಳ್ಳದ, ಆರ್.ಬಿ. ಹಳ್ಳದ, ಜಿ.ಡಿ. ಹಳ್ಳದ, ಡಿ.ಡಿ. ಹಳ್ಳದ, ಎನ್.ಆರ್. ಹಳ್ಳದ ಹಾಗೂ ಈ ಕುಟುಂಬದ ಅನೇಕರು ಸೋಮವಾರ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಗೆ ಬಂದು, ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರನ್ನು ಭೇಟಿಯಾಗಿದ್ದಾರೆ. ಸರ್ಕಾರದ ವಶಕ್ಕೆ ಹೋಗಿರುವ ಜಮೀನನ್ನು ಮರಳಿ ತಮ್ಮ ಕುಟುಂಬದ ಹೆಸರಿಗೆ ಮಾಡಿಕೊಡುವಂತೆ ಮನವಿ ಮಾಡಿದ್ದಾರೆ.
ಹಳ್ಳದ ಕುಟುಂಬದ ರೈತರ ಕೃಷಿ ಜಮೀನುಗಳ ಉತಾರ್ನಲ್ಲಿ ಸರ್ಕಾರಿ ಭೂಮಿ ಎಂದು ಉಲ್ಲೇಖವಾಗಿರುವ ಬಗ್ಗೆ ಸರ್ಕಾರಕ್ಕೆ ಮಾಹಿತಿ ಕಳುಹಿಸಲಾಗಿದೆ. ಯಾವ ಕಾರಣಕ್ಕೆ ಅವರ ಜಮೀನಿನಲ್ಲಿ ಸರ್ಕಾರಿ ಭೂಮಿ ಎಂದು ಬರುತ್ತಿದೆ ಎನ್ನುವ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ. ಈ ವಿಷಯದಲ್ಲಿ ಉದ್ದೇಶಪೂರ್ವಕವಾಗಿ ಅಧಿಕಾರಿಗಳು ತಪ್ಪು ಮಾಡಿದ್ದರೆ ಅವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು.
| ಎಂ.ಜಿ. ಹಿರೇಮಠ ಜಿಲ್ಲಾಧಿಕಾರಿ, ಬೆಳಗಾವಿ