ಕೆಲಸವಿದ್ದರಷ್ಟೇ ಕುಟುಂಬ ನಿರ್ವಹಣೆ

28spt8
Published on

ಹಿರಿಕರ ರವಿ ಸೋಮವಾರಪೇಟೆ


ವರ್ಕ್ಸ್‌ಶಾಪ್‌ನಲ್ಲಿ ಕೆಲಸವಿದ್ದರೆ ಕುಟುಂಬ ನಿರ್ವಹಣೆ ಮಾಡಬಹುದು. ಕೆಲಸವೇ ಇಲ್ಲದಿದ್ದರೆ ದೊಡ್ಡಮಟ್ಟದ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಸೋಮವಾರಪೇಟೆ ಪಟ್ಟಣದ ವರ್ಕ್ಸ್‌ಶಾಪ್ ಕೆಲಸಗಾರರು ತಮ್ಮ ನೋವು ತೋಡಿಕೊಂಡರು.


ರಾಜ್ಯದ ನಂ.೧ ದಿನಪತ್ರಿಕೆ ವಿಜಯವಾಣಿ ವತಿಯಿಂದ ನಡೆಸಿದ ಕಾಯಕ ಸಮಾಜದ ಕಾರ್ಯಕ್ರಮದಲ್ಲಿ ಪ್ರಮುಖರು ತಮ್ಮ ನೋವು ತೋಡಿಕೊಂಡರು.


ವರ್ಕ್ಸ್‌ಶಾಪ್‌ನಲ್ಲಿ ಮೆಕಾನಿಕ್, ಟಿಂಕರಿಂಗ್, ಪೆಯಿಟಿಂಗ್ ಇನ್ನಿತರ ಕೆಲಸಗಳನ್ನು ಮಾಡಬೇಕು. ಅಪಾಯಕಾರಿ ಕೆಲಸವೂ ಹೌದು, ಕೆಲವೊಮ್ಮೆ ಕೆಲಸದ ಸಮಯದಲ್ಲಿ ಅಪಘಾತಗಳು ಸಂಭವಿಸಿದರೆ, ಕೆಲಸಗಾರರ ಬದುಕು ಹಾಳಾಗುತ್ತದೆ. ಮಾಲಿಕ ಒಂದಷ್ಟು ಸಹಾಯ ಮಾಡಬಹುದು. ಉಳಿದಂತೆ ನಾವು ಬೀದಿಪಾಲಾಗುತ್ತೇವೆ ಎಂದು ಹೇಳಿದರು.


ವರ್ಕ್ಸ್‌ಶಾಪ್‌ಗಳಲ್ಲಿ ಕೆಲಸ ಮಾಡುವವರ ಅಯುಷ್ಯ ಬಹಳ ಕಡಿಮೆಯಿದೆ. ಅಯಿಲ್ ಸೇರಿದಂತೆ ಇನ್ನಿತರ ವಸ್ತುಗಳು ಚರ್ಮಕ್ಕೆ ಅಂಟುವುದರಿಂದ ಚರ್ಮರೋಗಗಳು, ಹೃದಯ ಸಂಬಂಧಿತ ಕಾಯಿಲೆಗೆ ತುತ್ತಾಗಬೇಕಾಗುತ್ತದೆ ಎಂದು ನೊಂದುಕೊಂಡರು.


ವರ್ಕ್ಸ್‌ಶಾಪ್ ಕೆಲಸಗಾರರಿಗೆ ಯಾವುದೇ ಭದ್ರತೆ ಇಲ್ಲ. ಕರೊನಾ ಸಂದರ್ಭದ ಎರಡು ವರ್ಷದ ಬದುಕು ನರಕಯಾತನೆಯಾಗಿತ್ತು. ಬೇರೆ ಕೆಲಸ ಗೊತ್ತಿಲ್ಲದ ಕಾರಣ ಊಟಕ್ಕಾಗಿ ಪರದಾಡುವಂತಾಗಿತ್ತು. ನಂತರ ಕೂಲಿ ಕೆಲಸಕ್ಕೆ ಹೋಗಿ, ಕುಟುಂಬ ಸಾಕಿದೇವು. ನಂತರ ಬದುಕು ಕಟ್ಟಿಕೊಳ್ಳಲು ಶ್ರಮಪಡುತ್ತಿರುವಾಗಲೆ, ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವರ್ಕ್ಸ್‌ಶಾಪ್ ಏರಿಯವನ್ನು ಜೆಸಿಬಿ ಮೂಲಕ ವರ್ಕ್ಸ್‌ಶಾಪ್ ಕಟ್ಟಡಗಳನ್ನು ಅಕ್ರಮ ಎಂಬ ಕಾರಣ ನೀಡಿ, ನೆಲಸಮವಾಯಿತು. ಕಳೆದ ೫೦ ವರ್ಷಗಳಿಂದ ವರ್ಕ್‌ಶಾಪ್ ಮೂಲಕ ಬದುಕು ಕಟ್ಟಿಕೊಂಡಿದ್ದ ೨೯ ಜನ ಬೀದಿ ಪಾಲಾದೆವು. ಈಗ ೯ ಜನ ದೂರದ ಪ್ರದೇಶದಲ್ಲಿ ಶೆಡ್ ಹಾಕಿಕೊಂಡು ವೃತ್ತಿ ಮಾಡುತ್ತಿದ್ದಾರೆ. ಇನ್ನು ೨೦ ಕುಟುಂಬದವರು ಬೀದಿಯಲ್ಲಿದ್ದಾರೆ. ಬ್ಯಾಗ್‌ನಲ್ಲಿ ಟೂಲ್ಸ್‌ಗಳನ್ನು ಇಟ್ಟುಕೊಂಡು ಅಲ್ಲಲ್ಲಿ ಗಾಡಿ ನಿಲ್ಲಿಸಿಕೊಂಡು ಬಿಸಿಲಿನಲ್ಲಿ ಕೆಲಸವನ್ನು ಮಾಡುತ್ತಿದ್ದೇವೆ ಎಂದು ಹೇಳಿದರು.


ಕೆಲವರು ಕೂಲಿ ಕೆಲಸಕ್ಕೆ ಹೋಗುತ್ತಿದ್ದಾರೆ. ಇನ್ನು ಕೆಲವು ಕೆಲಸಗಾರರ ಕೆಲಸ ಅರಸಿ ನಗರ ಪ್ರದೇಶಕ್ಕೆ ತೆರಳಿದ್ದಾರೆ. ಇನ್ನು ಕೆಲವರು ಗ್ರಾಮೀಣ ಭಾಗದಲ್ಲಿ ಶೆಡ್ ಮಾಡಿಕೊಂಡು ಕೆಲಸ ನಿರ್ವಹಿಸುತ್ತಿದ್ದಾರೆ. ಜನರು ವಾಹನಗಳನ್ನು ದುರಸ್ತಿಪಡಿಸಲು ಹುಡಕಿಕೊಂಡು ಹೋಗಬೇಕಾಗಿದೆ. ಪಟ್ಟಣದಲ್ಲಿ ವರ್ಕ್ಸ್‌ಶಾಪ್ ಏರಿಯಾ ಇಲ್ಲದಂತಾಗಿದೆ ಎಂದು ಹೇಳಿದರು.


ಕಳೆದ ನವೆಂಬರ್ ೫ರಂದು ಪಟ್ಟಣ ಪಂಚಾಯಿತಿ ವರ್ಕ್ಸ್‌ಶಾಪ್ ಏರಿಯಾದಲ್ಲಿದ್ದ ಕಟ್ಟಡವನ್ನು ನೆಲಸಮ ಮಾಡಿದೆ. ಆದರೆ ಇದುವರೆಗೆ ವರ್ಕ್‌ಶಾಪ್‌ಗಳಿಗೆ ಪರ್ಯಾಯ ಜಾಗ ಕೊಟ್ಟಿಲ್ಲ ಎಂದು ಆರೋಪಿಸಿದರು.


ವರ್ಕ್ಸ್‌ಶಾಪ್ ಏರಿಯಾದ ಕಟ್ಟಡಗಳನ್ನು ಅಕ್ರಮ ಎಂದು ಹೇಳಿ ಪಟ್ಟಣ ಪಂಚಾಯಿತಿ ಒಡೆದು ಹಾಕಿದರು. ಪರ್ಯಾಯ ಜಾಗ ಕೊಡುವಂತೆ ಕೇಳಿಕೊಂಡರೂ ಸ್ಪಂದಿಸಲಿಲ್ಲ. ಎಲ್ಲರೂ ಬೀದಿಗೆ ಬಂದಿದ್ದೇವೆ. ಕೆಲವರು ಬೀದಿ ಬೀದಿಯಲ್ಲಿ ವಾಹನಗಳನ್ನು ರಿಪೇರಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇವೆ.
-ಬಿ.ಎನ್.ರಂಗಸ್ವಾಮಿ, ಮೆಕನಿಕ್, ಸೋಮವಾರಪೇಟೆ

ವಕ್ಸ್‌ಶಾಪ್ ಏರಿಯದಲ್ಲಿದ್ದ ಕಟ್ಟಡಗಳನ್ನು ಪಂಚಾಯಿತಿ ಅಧಿಕಾರಿಗಳು ನ.೫ರಂದು ನೆಲಸಮ ಮಾಡಿದರು. ಪಟ್ಟಣ ವ್ಯಾಪ್ತಿಯಲ್ಲಿ ವರ್ಕ್‌ಶಾಪ್ ತೆರೆಯಲು ಜಾಗವೇ ಇಲ್ಲ. ಚೌಡ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವರ್ಕ್ಸ್‌ಶಾಪ್ ತೆರೆಯಲು ಅನುಮತಿ ಇಲ್ಲ.ಏನೂ ಮಾಡುವುದು ಗೊತ್ತಿಲ್ಲ. ಈ ವೃತ್ತಿಯಿಂದಲೆ ಬದುಕು ಕಟ್ಟಿಕೊಳ್ಳಬೇಕು.
-ಪರಮೇಶ್. ಮೆಕಾನಿಕ್, ಸೋಮವಾರಪೇಟೆ

ಸೋಮವಾರಪೇಟೆ ಪಟ್ಟಣದ ವರ್ಕ್ಸ್‌ಶಾಪ್ ಏರಿಯಾದ ಕಟ್ಟಡಗಳನ್ನು ನೆಲಸಮ ಮಾಡಿದ ಮೇಲೆ ದಿಕ್ಕು ತೋಚದಂತಾಯಿತು. ಅಲ್ಲಿಂದ ೪ಕಿ.ಮೀ.ದೂರದಲ್ಲಿ ಖಾಸಗಿಯವರ ಜಾಗದಲ್ಲಿ ಶೆಡ್ ನಿರ್ಮಿಸಿಕೊಂಡು ವಾಹನಗಳ ಕೆಲಸ ಮಾಡುತ್ತಿದ್ದೇವೆ. ನಾಲ್ಕು ಜನ ಸೇರಿಕೊಂಡು ೯ಲಕ್ಷ ಖರ್ಚು ಮಾಡಿ ಶೆಡ್ ನಿರ್ಮಿಸಿಕೊಂಡಿದ್ದೇವೆ. ಗದ್ದೆ ಭೂಮಿಯಲ್ಲಿ ಶೆಡ್ ನಿರ್ಮಿಸಿಕೊಂಡಿದ್ದೇವೆ. ಮಳೆಗಾಲದಲ್ಲಿ ನೀರು ನಿಲ್ಲುವ ಭಯ ಇದೆ.
-ಬಿ.ಆರ್.ಶಿವಪ್ಪ, ಪೈಂಟರ್, ಸೋಮವಾರಪೇಟೆ

ಸೋಮವಾರಪೇಟೆಯಲ್ಲಿ ಕಟ್ಟಡಗಳನ್ನು ಕಳೆದುಕೊಂಡ ಮೇಲೆ ಕೂಡುರಸ್ತೆಯಲ್ಲಿ ಶೆಡ್ ನಿರ್ಮಿಸಿ ಕೆಲಸ ಮಾಡುತ್ತಿದ್ದೇವೆ. ಪಟ್ಟಣದಿಂದ ದೂರವಿದೆ. ವಾಹನ ಮಾಲೀಕರಿಗೂ ಖರ್ಚು. ಕೆಲಸವಿದ್ದರೆ ಮಾತ್ರ ದುಡಿಮೆ ಇದೆ. ಕರೋನಾ ಸಂದರ್ಭ ಕೆಲಸವಿಲ್ಲದೆ ಸಂಕಷ್ಟಕ್ಕೆ ಸಿಲುಕಿ ಸಾಲಗಾರರಾಗಿದ್ದೇವೆ. ಈಗ ವರ್ಕ್ಸ್‌ಶಾಪ್ ಏರಿಯಲ್ಲಿ ಕಟ್ಟಡಗಳನ್ನು ಕಳೆದು ಅನಾಥರಾಗಿದ್ದೇವೆ. ಮಾನವೀಯತೆಯಿಂದಾದರೂ ನಮಗೆ ಜಾಗ ಕೊಡಬಹುದಿತ್ತು.
-ಸಿ.ಸಿ.ದಿನೇಶ್, ಟಿಂಕರಿಂಗ್ ಕೆಲಸಗಾರ

ವರ್ಕ್‌ಶಾಪ್ ಕೆಲಸ ಮಾಡುವವರಿಗೆ ವಿಶೇಷವಾಗಿ ಸರ್ಕಾರದಿಂದ ಸೌಲಭ್ಯಗಳಿಲ್ಲ. ಭದ್ರತೆ ಇಲ್ಲ. ಬಡ್ಡಿ ರಹಿತ ಸಾಲವನ್ನು ಕೊಡುತ್ತಿಲ್ಲ. ಫೈನಾನ್ಸ್‌ನಿಂದ ಸಾಲವನ್ನು ಪಡೆದು ಸಲಕರಣೆಗಳನ್ನು ತೆಗೆದುಕೊಳ್ಳಬೇಕು. ಕೆಲಸ ಇಲ್ಲದಿದ್ದರೆ ಬಡ್ಡಿ ಕಟ್ಟಲು ಸಾಧ್ಯವಿಲ್ಲ. ಕುಟುಂಬ ನಿರ್ವಹಣೆ ಮಾಡುವುದೇ ಕಷ್ಟ. ಕಷ್ಟವನ್ನು ಕೇಳುವವರು ಇಲ್ಲದಂತಾಗಿದೆ.
-ಕೆ.ಎಸ್.ಸುಜು, ಕೆ.ಎಸ್.ಸುಜು

ವರ್ಕ್‌ಶಾಪ್ ಏರಿಯಾದಲ್ಲಿರುವ ಕೆಲ ವರ್ಕ್ಸ್‌ಶಾಪ್, ಅಂಗಡಿ ಮಳಿಗೆಗಳನ್ನು ಪಟ್ಟಣ ಪಂಚಾಯಿತಿ ಅಧಿಕಾರಿಗಳು ಸೂಕ್ತ ಪೋಲೀಸ್ ಭದ್ರತೆಯಲ್ಲಿ ತೆರವುಗೊಳಿಸಿದರು. ವಾಹನ ನಿಲುಗಡೆ ಮತ್ತು ಗ್ಯಾರೇಜ್ ನಿರ್ಮಿಸುವಂತೆ ಪಟ್ಟಣ ಪಂಚಾಯಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಗೊತ್ತಾಗಿದೆ. ವರ್ಕ್ಸ್‌ಶಾಪ್ ಕಳೆದುಕೊಂಡಿರುವ ಸಂತ್ರಸ್ಥರಿಗೆ ಜಾಗ ಕೊಡಬೇಕು.
-ದಿನೇಶ್ ಮೆಕಾನಿಕ್, ಕೂಡುರಸ್ತೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net