

ಸುಂಟಿಕೊಪ್ಪ: ಸಮೀಪದ ಕೊಡಗರಹಳ್ಳಿಯಲ್ಲಿ ಕುಂದೂರುಮೊಟ್ಟೆ ಚಾಮುಂಡೇಶ್ವರಿ ಸೇವಾ ಸಮಿತಿ ವತಿಯಿಂದ ಶ್ರೀ ಮಹಾವಿಷ್ಣು, ಶ್ರೀ ಚಾಮುಂಡೇಶ್ವರಿ, ರಕ್ತೇಶ್ವರಿ ಪರಿವಾರ ದೇವರುಗಳ 47ನೇ ವಾರ್ಷಿಕ ಮಹೋತ್ಸವ ಏ.21ರಿಂದ 23ರವರೆಗೆ ಜರುಗಿತು. ಬುಧವಾರ ವಿವಿಧ ಪೂಜಾ ವಿಧಿವಿಧಾನಗಳ ಮೂಲಕ ಸಂಪನ್ನಗೊಂಡಿತು.
ಏ.21ರಂದು ಮಧ್ಯಾಹ್ನ ಗಣಪತಿ ಹೋಮ ಮತ್ತು ಕೊಡಿ ಏರಿಸುವುದರೊಂದಿಗೆ ಪೂಜಾ ಕಾರ್ಯಕ್ರಮಗಳು ಪ್ರಾರಂಭಗೊಂಡಿದ್ದವು. ದೇವಾಲಯವನ್ನು ತಳಿರು, ತೋರಣ ಹಾಗೂ ವಿದ್ಯುತ್ ದೀಪಗಳಿಂದ ಚಿತ್ತಾಕರ್ಷವಾಗಿ ಅಲಂಕರಿಸಲಾಗಿತ್ತು.ಸುತ್ತಮುತ್ತಲ ನೂರಾರು
ಗ್ರಾಮಸ್ಥರು ವಾರ್ಷಿಕೋತ್ಸವ ಮೂರು ದಿನಗಳ ಕಾಲ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಸಂಜೆ 7ಗಂಟೆಯಿಂದ ದೀಪರಾಧನೆ, ಏಳು ಸುತ್ತಿನ ಪ್ರದಕ್ಷಣೆ ಹಾಗೂ ಶ್ರೀ ಚಾಮುಂಡಿ ತಂಡದಿಂದ ಚಂಡೆ ಮೇಳ ನಡೆಯಿತು.
ಮಂಗಳವಾರ ಶ್ರೀ ಚಾಮುಂಡೇಶ್ವರಿ ದೇವಿಯ ಅಭಿಷೇಕ ಪೂಜೆಯೊಂದಿಗೆ ಭಕ್ತರು ವಿಶೇಷ ಪೂಜೆ ಸಲ್ಲಿಸಿ ಹರಕೆಗಳನ್ನು ಸಲ್ಲಿಸಿದರು.
ರಾತ್ರಿಯಿಂದ ವಿವಿಧ ದೈವಗಳ ಕೋಲ ನಡೆದವು. ಈ ವೇಳೆ ಸಿಡಿಸಿದ ಪಟಾಕಿಗಳು ಚಿತ್ತಾಕರ್ಷಕವಾಗಿದ್ದವು. ಬಧವಾರ ಮಧ್ಯಾಹ್ನ ಅಜ್ಜಪ್ಪ ಕೋಲ, ವಿಷ್ಣುಮೂರ್ತಿ ಕೋಲ, ರಕ್ತೇಶ್ವರಿ ಹಾಗೂ ಚಾಮುಂಡೇಶ್ವರಿ ಕೋಲದೊಂದಿಗೆ ರಾತ್ರಿ 8 ಗಂಟೆಗೆ ಶ್ರೀದೇವಿ ನೇವೈದ್ಯದೊಂದಿಗೆ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ತೆರೆಬಿದ್ದಿತು.