ಸ್ವ-ಉದ್ಯೋಗದಿಂದ ಕುಟುಂಬದ ಆರ್ಥಿಕ ಉನ್ನತಿ

KMT MIRJAN
Published on

ಕುಮಟಾ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ, ಮಹಿಳೆಯರನ್ನು ಯಶಸ್ವಿ ಸ್ವಾವಲಂಬಿಯರನ್ನಾಗಿ ಮಾಡುವುದೇ ಜ್ಞಾನ ವಿಕಾಸ ಮಹಿಳಾ ಕಾರ್ಯಕ್ರಮದ ಉದ್ದೇಶ. ಯೋಜನೆಯಡಿ ಉಚಿತ ಹೊಲಿಗೆ ತರಬೇತಿ ಪಡೆದ ಮಹಿಳೆಯರು ಸ್ವಉದ್ಯೋಗ ಪ್ರಾರಂಭಿಸಿ ಕುಟುಂಬದ ಆರ್ಥಿಕ ಉನ್ನತಿಗೆ ಕಾರಣರಾಗಿ ಎಂದು ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಕಲ್ಮೇಶ ಎಂ. ಹೇಳಿದರು.

ತಾಲೂಕಿನ ಮಿರ್ಜಾನ್​ನ ತಾರಿಬಾಗಿಲಿನಲ್ಲಿ ದಿವ್ಯಜ್ಯೋತಿ ಜ್ಞಾನ ವಿಕಾಸ ಕೇಂದ್ರದಲ್ಲಿ ಜ್ಞಾನ ವಿಕಾಸ ಮಹಿಳಾ ಕಾರ್ಯಕ್ರಮದ ಅಡಿಯಲ್ಲಿ ಮೂರು ತಿಂಗಳ ಕಾಲ ನೀಡಿದ ಉಚಿತ ಹೊಲಿಗೆ ತರಬೇತಿ ಕಾರ್ಯಕ್ರಮದ ಸಮಾರೋಪ ಉದ್ಘಾಟಿಸಿ ಅವರು ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗ್ರಾಪಂ ಸದಸ್ಯ ಗಣೇಶ ಅಂಬಿಗ, ಕಲಿಕಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿ ಸ್ವ ಉದ್ಯೋಗದ ಮಹತ್ವ ವಿವರಿಸಿದರು. ಕಲಿಕಾರ್ಥಿಗಳಾದ ಶೀಲಾ ಮತ್ತು ಸವಿತಾ ತರಬೇತಿಯ ಅನುಭವ ಹಂಚಿಕೊಂಡರು. ಹೊಲಿಗೆ ತರಬೇತಿ ನೀಡಿದ ಗೀತಾ ಪಟಗಾರ ಅವರಿಗೆ ಗುರುಕಾಣಿಕೆ ನೀಡಿ ಗೌರವಿಸಲಾಯಿತು. ಸ್ಥಳೀಯರಾದ ಸೋಮಾ ಅಂಬಿಗ ವೇದಿಕೆಯಲ್ಲಿದ್ದರು.

ಉಚಿತ ಹೊಲಿಗೆ ತರಬೇತಿಯಲ್ಲಿ 30 ಮಂದಿ ಗ್ರಾಮಾಭಿವೃದ್ಧಿ ಸಂಘದ ಮಹಿಳಾ ಸದಸ್ಯರು ಪಡೆದುಕೊಂಡಿದ್ದು ತರಬೇತಿಯಲ್ಲಿ ಚೂಡಿದಾರ್, ಬ್ಲೌಸ್ ಸಹಿತ 23 ವಿವಿಧ ಬಗೆಯ ಹೊಲಿಗೆ ಕಲಿಸಲಾಗಿತ್ತು. ಜ್ಞಾನ ವಿಕಾಸ ತಾಲೂಕು ಸಮನ್ವಯಾಧಿಕಾರಿ ವೀಣಾ ದಿನೇಶ ನಿರ್ವಹಿಸಿದರು. ಸೇವಾಪ್ರತಿನಿಧಿ ಶ್ಯಾಮಲಾ, ಕೇಂದ್ರದ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net