ಕೌಟಂಬಿಕ ಕಲಹ, ಅಣ್ಣನಿಂದಲೇ ತಮ್ಮನ ಕೊಲೆ

tunga-nagar-police-station
ಶಿವಮೊಗ್ಗ ತುಂಗಾನಗರ ಠಾಣೆ
Published on

ಶಿವಮೊಗ್ಗ: ನಗರದ ಹೊರವಲಯ ಅನುಪಿನಕಟ್ಟೆ ಲಂಬಾಣಿ ತಾಂಡಾದಲ್ಲಿ ಕೌಟಂಬಿಕ ವಿಚಾರಕ್ಕೆ ಸಂಬಂಧಿಸಿ ಮದ್ಯದ ನಶೆಯಲ್ಲಿ ಸಹೋದರರ ನಡುವೆ ಗಲಾಟೆ ನಡೆದಿದ್ದು, ಅಣ್ಣನೇ ತಮ್ಮನ ಕೊಲೆ ಮಾಡಿದ್ದಾನೆ.

ಲಂಬಾಣಿ ತಾಂಡಾದ ಗಿರೀಶ್ ನಾಯ್ಕ (28) ಕೊಲೆಗೀಡಾದವ. ಆತನ ಅಣ್ಣ ಲೋಕೇಶ್ ನಾಯ್ಕ (30) ಕೊಲೆ ಆರೋಪಿ. ಆತನನ್ನು ತುಂಗಾನಗರ ಠಾಣೆ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

ಗಾರೆ ಕೆಲಸ ಮಾಡುತ್ತಿದ್ದ ಲೋಕೇಶ್ ನಾಯ್ಕ ಬೊಮ್ಮನಕಟ್ಟೆ ಬಡಾವಣೆಯಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿದ್ದ. ಕೆಲ ದಿನಗಳ ಹಿಂದೆ ಅನುಪಿನಕಟ್ಟೆಯಲ್ಲಿದ್ದ ನಿವಾಸಕ್ಕೆ ಆಗಮಿಸಿ ಇಲ್ಲೇ ನೆಲೆಸಿದ್ದ. ಇದೇ ವಿಚಾರಕ್ಕೆ ಸಂಬಂಧಿಸಿ ಸಹೋದರರ ನಡುವೆ ಕಲಹ ನಡೆಯುತ್ತಿತ್ತು. ಶನಿವಾರ ರಾತ್ರಿ ಮದ್ಯದ ನಶೆಯಲ್ಲಿದ್ದ ಇಬ್ಬರ ನಡುವೆ ಇದೇ ವಿಚಾರವಾಗಿ ಜಗಳವಾಗಿದ್ದು, ಇದು ವಿಕೋಪಕ್ಕೆ ತಿರುಗಿ ಪರಸ್ಪರ ಕೈ ಕೈ ಮಿಲಾಯಿಸಿಕೊಂಡಿದ್ದರು. ತದನಂತರ ತಡರಾತ್ರಿ ಗಿರೀಶ್ ನಾಯ್ಕನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಆರೋಪಿ ಲೋಕೇಶ್ ನಾಯ್ಕ ಹತ್ಯೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.

ಘಟನಾ ಸ್ಥಳಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್, ಇನ್‌ಸ್ಪೆಕ್ಟರ್ ಕೆ.ಟಿ.ಗುರುರಾಜ್, ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net