

ಬೆಂಗಳೂರು: ಹಣಕಾಸಿನ ವಿಚಾರವಾಗಿ ನಡೆದ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿ ಕಡೆಯವರು ಹಲ್ಲೆ ನಡೆಸಿರುವುದಾಗಿ ಆರೋಪಿಸಿ ಪತಿ ಬಾಣಸವಾಡಿ ಠಾಣೆಗೆ ದೂರು ನೀಡಿದ್ದಾನೆ.
ಬಾಣಸವಾಡಿ ಮಾರುತಿ ಸೇವಾನಗರದ ವಿನೋದ್ ಕುಮಾರ್ ದೂರು ನೀಡಿದ್ದು, ಆತನ ಪತ್ನಿ ಶ್ರೀದಿವ್ಯಾ, ಅತ್ತೆ ರಾಜೇಶ್ವರಿ, ಬಾಮೈದುನರಾದ ನವೀನ್, ದೇವರಾಜ್, ಸುಬ್ರಮಣಿ, ಅಪ್ಪಣ್ಣ ವಿರುದ್ಧ ಬಾಣಸವಾಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ದಂಪತಿ ಮಧ್ಯೆ ಕೌಟುಂಬಿಕ ವಿಚಾರವಾಗಿ ಜಗಳ ನಡೆಯುತ್ತಿತ್ತು. ಶ್ರೀದಿವ್ಯಾ ಇತ್ತೀಚೆಗೆ ಹೆರಿಗೆಗೆಂದು ತವರು ಮನೆಗೆ ಹೋಗಿದ್ದರು. ಜ.9ರಂದು ವಿನೋದ್ ಮನೆ ಬಳಿ ಬಂದ ಶ್ರೀದಿವ್ಯಾ ಕಡೆಯವರು ಕೌಟುಂಬಿಕ ವಿಚಾರವಾಗಿ ಆತನೊಂದಿಗೆ ಜಗಳವಾಡಿ ರಸ್ತೆಗೆ ಕರೆತಂದು ಹಲ್ಲೆ ನಡೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.