ವಂಚನೆ ಪ್ರಕರಣ ಆರೋಪಿ ಪತ್ತೆಗೆ ವಿಶೇಷ ತಂಡ

Published on

ಪುತ್ತೂರು: ಯುವತಿಯನ್ನು ವಂಚಿಸಿದ ಪ್ರಕರಣದ ಆರೋಪಿ ಪತ್ತೆಗೆ ಪೊಲೀಸ್ ಇಲಾಖೆ ವಿಶೇಷ ತಂಡ ರಚಿಸಿದ್ದು, ಜಿಲ್ಲೆಯ ವಿವಿಧ ಕಡೆಗೆ ತೆರಳಿ ತನಿಖೆ ನಡೆಸುತ್ತಿದ್ದಾರೆ.

ಬಪ್ಪಳಿಗೆ ನಿವಾಸಿ, ಬಿಜೆಪಿ ನಗರ ಮಂಡಲ ಮಾಜಿ ಅಧ್ಯಕ್ಷ ಪುತ್ರ ಶ್ರೀಕೃಷ್ಣ ಜೆ. ರಾವ್ (೨೧) ಪ್ರಕರಣ ದಾಖಲಾದ ಮಾಹಿತಿ ತಿಳಿಯುತ್ತಿದ್ದಂತೆ ಊರು ಬಿಟ್ಟಿದ್ದಾನೆ. ಪೊಲೀಸ್ ಇಲಾಖೆ ಈತನ ಚಲನವಲನವನ್ನು ಪತ್ತೆ ಹಚ್ಚುವ ಕಾರ್ಯಕ್ಕೆ ಮುಂದಾಗಿದ್ದು, ಯುವಕನ ಮೊಬೈಲ್ ಕನ್ಯಾಡಿ ಸಮೀಪ ಸ್ವಿಚ್ಡ್ ಆಫ್ ಆಗಿರುವುದು ಪತ್ತೆಯಾಗಿದೆ. ಈ ಆಧಾರದಲ್ಲಿ ಉಜಿರೆಯ ಅಜ್ಜಿ ಮನೆಗೆ ತೆರಳಿ ಪೊಲೀಸರು ಮಾಹಿತಿ ಪಡೆದಿದ್ದಾರೆ.

*ಜಾತಿ ಸಮಸ್ಯೆ: ಠಾಣೆಯಲ್ಲಿ ಪ್ರಕರಣ ದಾಖಲಾಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ವಿವಾಹವಾಗುವುದಾಗಿ ಹೇಳಿಕೊಂಡಿದ್ದರು. ಯುವಕ ಪದಾರ್ತಿ ಜಾತಿಗೆ ಸೇರಿದ್ದು, ಸಂತ್ರಸ್ತ ಯುವತಿ ವಿಶ್ವಕರ್ಮರಾಗಿದ್ದಾರೆ. ಜಾತಿ ವ್ಯವಸ್ಥೆಯ ಕಾರಣದಿಂದ ವಿವಾಹವಾಗುವುದಕ್ಕೆ ಯುವಕನ ಕುಟುಂಬಕ್ಕೆ ಮೊದಲೇ ಒಪ್ಪಿಗೆಯಿರಲಿಲ್ಲ.

ಕಾಲೇಜಿಗೆ ಗೈರು!

ಪುತ್ತೂರಿನ ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಯುವಕ ವ್ಯಾಸಂಗ ಮಾಡುತ್ತಿದ್ದು, ತಿಂಗಳಿಂದ ತರಗತಿಗೆ ಹಾಜರಾಗಿಲ್ಲ ಎಂಬ ಮಾಹಿತಿ ಬಹಿರಂಗವಾಗಿದೆ. ಯುವತಿ ಗರ್ಭಿಣಿಯಾದ ವಿಚಾರ ತಿಳಿದು ಮೊದಲ ಬಾರಿಗೆ ಠಾಣೆಗೆ ತೆರಳಿ ದೂರು ನೀಡಿದ ಬಳಿಕ ಯುವಕ ಕಾಲೇಜಿಗೆ ಗೈರಾಗಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net