ಸುಳ್ಳು ಸುದ್ದಿ ಹರಡಿದರೆ ಕ್ರಮ

6telsang2-Web
ತೆಲಸಂಗ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ರವಿ ಬಂಗಾರೆಪ್ಪನವರ ಭೇಟಿ ನೀಡಿ ಪರಿಶೀಲಿಸಿದರು.ಡಾ. ವಾಸಂತಿ, ಸಂಗಮೇಶ ಕುಮಠಳ್ಳಿ, ವಿನೋದ ಪಾಟೀಲ, ಸುಜಾತಾ ದೀಕ್ಷಿತ್ ಇದ್ದರು.
Published on

ತೆಲಸಂಗ: ಗ್ರಾಮದಲ್ಲಿ ಕರೊನಾ ಸೋಂಕಿತರು ಪತ್ತೆಯಾಗಿದ್ದಾರೆ ಎಂಬ ಸುಳ್ಳು ಸುದ್ದಿ ಹರಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ರವಿ ಬಂಗಾರೆಪ್ಪನವರ ಎಚ್ಚರಿಕೆ ನೀಡಿದ್ದಾರೆ.

ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶನಿವಾರ ಭೇಟಿ ನೀಡಿ ಮಾತನಾಡಿದ ಅವರು, ಎರಡು ದಿನಗಳಿಂದ ತೆಲಸಂಗ ಸೇರಿ ಹಲವು ಗ್ರಾಮಗಳಲ್ಲಿ ಕರೊನಾ ಪತ್ತೆಯಾಗಿದೆ ಎಂದು ಗಾಳಿ ಸುದ್ದಿ ಹರಿಬಿಟ್ಟು ಜನರನ್ನು ಗಾಬರಿಗೊಳಿಸುವ ಕೆಲಸವನ್ನು ಕಿಡಿಗೇಡಿಗಳು ಮಾಡುತ್ತಿದ್ದಾರೆ. ಇಂತಹ ಸುಳ್ಳು ಸುದ್ದಿಗಳಿಗೆ ಜನರು ಕಿವಿಗೊಡಬಾರದು. ತೆಲಸಂಗ ಮೂಲದ 30 ಜನರನ್ನು ಮಹಾರಾಷ್ಟ್ರದಿಂದ ಆಗಮಿಸಿದ ಕಾರಣಕ್ಕೆ ಕ್ವಾರಂಟೈನ್ ಮಾಡಲಾಗಿದೆ. ಸರ್ಕಾರದ ಆದೇಶವನ್ನು ಎಲ್ಲರೂ ತಪ್ಪದೆ ಪಾಲಿಸಬೇಕು ಎಂದರು.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಭೀರಪ್ಪ ಕಡಗಂಚಿ ಮಾತನಾಡಿದರು. ವೈದ್ಯಾಧಿಕಾರಿ ಡಾ. ವಾಸಂತಿ, ಸಂಗಮೇಶ ಕುಮಠಳ್ಳಿ, ವಿನೋದ ಪಾಟೀಲ, ಸುಜಾತಾ ದೀಕ್ಷಿತ್ ಇದ್ದರು.

ಕೊಕಟನೂರ ವರದಿ: ಕ್ವಾರಂಟೈನ್ ಕೇಂದ್ರದಲ್ಲಿರುವವರಲ್ಲಿ ಜ್ವರ, ಕೆಮ್ಮು ಹಾಗೂ ನೆಗಡಿ ಕಾಣಿಸಿಕೊಂಡರೆ ತಕ್ಷಣ ವೈದ್ಯಾಧಿಕಾರಿಗಳನ್ನು ಸಂಪರ್ಕಿಸಬೇಕು ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ರವೀಂದ್ರ ಬಂಗಾರೆಪ್ಪನವರ ಹೇಳಿದ್ದಾರೆ. ಗ್ರಾಮದ ಸರ್ಕಾರಿ ಬಿಸಿಎಂ ವಸತಿ ನಿಲಯ ಹಾಗೂ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಕ್ವಾರಂಟೈನ್ ಕೇಂದ್ರಗಳಿಗೆ ಈಚೆಗೆ ಭೇಟಿ ನೀಡಿ ಕುಂದುಕೊರತೆ ಹಾಗೂ ಆರೋಗ್ಯ ವಿಚಾರಿಸಿ ಅವರು ಮಾತನಾಡಿದರು. ಡಾ. ಚಂದ್ರಕಾಂತ ದೂಳಶೆಟ್ಟಿ, ಪಿಡಿಒ ಎಸ್.ಎಸ್.ತುಂಗಳ, ಗ್ರಾಮ ಲೆಕ್ಕಾಧಿಕಾರಿ ಕಲ್ಮೇಶ ಕಲಮಡಿ, ವಿಶ್ವನಾಥ ಮೋರೆ, ಅಶೋಕ ಪಾಟೀಲ, ಅರಿಹಂತ ಹಂಜಿ, ಮೊಸೀನ್ ಸಲಗರ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net