ಆದಿವಾಸಿ ಮೇಲೆ ಸುಳ್ಳು ಹತ್ಯೆ ಪ್ರಕರಣ: ವಿಚಾರಣೆ ನಡೆಸಿ ತೀರ್ಪು ಕಾಯ್ದಿರಿಸಿದ ನ್ಯಾಯಾಲಯ

mysoreDistCourt 4 MAR 20
Published on

ಮೈಸೂರು: ಬದುಕಿರುವ ಪತ್ನಿ ಸತ್ತಿದ್ದಾಳೆಂದು ಆದಿವಾಸಿಯೊಬ್ಬರ ಮೇಲೆ ಪೊಲೀಸ್ ಅಧಿಕಾರಿ ಕೊಲೆ ಆರೋಪ ಹೊರಿಸಿ ಜೈಲುಪಾಲಾಗುವಂತೆ ಮಾಡಿದ್ದ ಪ್ರಕರಣದ ವಿಚಾರಣೆಯನ್ನು ಗುರುವಾರ ನಡೆಸಿದ ನಗರದ 5ನೇ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ತೀರ್ಪನ್ನು ಏ.23ಕ್ಕೆ ಕಾಯ್ದಿರಿಸಿದೆ.

ಪೊಲೀಸರು ಮೃತಪಟ್ಟಿದ್ದಾಳೆ ಎಂದು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದ ಮಹಿಳೆಯು ಇತ್ತೀಚೆಗೆ ಪ್ರಿಯಕರನೊಂದಿಗೆ ಪ್ರತ್ಯಕ್ಷವಾದ ನಂತರ ಪ್ರಕರಣಕ್ಕೆ ರೋಚಕ ತಿರುವು ದೊರೆಯಿತು. ಆ ಸಂದರ್ಭ ಆದಿವಾಸಿ ಮೇಲೆ ಪೊಲೀಸ್ ಅಧಿಕಾರಿ ಹೊರಿಸಿದ್ದ ಆರೋಪ ಸೊಳ್ಳು ಎಂಬುದು ಎಲ್ಲರಿಗೂ ಮನವರಿಕೆಯಾಯಿತು.

ಪ್ರಕರಣದ ವಿವರ:

ಕೊಡಗು ಜಿಲ್ಲೆಯ ಕುಶಾಲನಗರದ ಬಸವನಹಳ್ಳಿಯ ನಿವಾಸಿ ಸುರೇಶ್ ಹಾಗೂ ಕುಶಾಲನಗರ ನಿವಾಸಿ ಮಲ್ಲಿಗೆ ವಿವಾಹವಾಗಿದ್ದರು. ಆದರೆ, ಆಕೆಗೆ ಮತ್ತೊಂದು ವ್ಯಕ್ತಿಯೊಂದಿಗೆ ಪ್ರೀತಿ ಇತ್ತು. ಆಕೆ ಯಾರಿಗೂ ಹೇಳದೆ 2020 ನವೆಂಬರ್‌ನಲ್ಲಿ ಪ್ರಿಯಕರನೊಂದಿಗೆ ಓಡಿ ಹೋಗಿದ್ದಳು. ಪತ್ನಿ ಕಾಣೆಯಾದ ನಂತರ ಸುರೇಶ್ ಕುಶಾಲನಗರ ಪೊಲೀಸ್ ಠಾಣೆಗೆ ಕಾಣೆಯಾದ ಕುರಿತು ದೂರು ನೀಡಿದ್ದರು. 2021 ಜೂನ್ ತಿಂಗಳಿನಲ್ಲಿ ಬೆಟ್ಟದಪುರದಲ್ಲಿ ಅಪರಿಚಿತ ಮಹಿಳೆಯೊಬ್ಬರ ಮೃತದೇಹ ಪತ್ತೆಯಾಗಿತ್ತು. ಆ ಮಹಿಳೆಯ ಗುರುತು ಪತ್ತೆ ಹಚ್ಚಲು ಸುರೇಶ್‌ನನ್ನು ಕರೆದೊಯ್ದು ಅದು ಕಾಣೆಯಾದ ಮಲ್ಲಿಗೆಯ ಮೃತದೇಹವೆಂದು ಪೊಲೀಸರೇ ತೀರ್ಮಾನಿಸಿ ಸುರೇಶ್ ಕೊಲೆ ಆರೋಪಿ ಎಂದು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿ ಆತ ಎರಡು ವರ್ಷ ಜೈಲು ಶಿಕ್ಷೆ ಅನುಭವಿಸುವಂತೆ ಮಾಡಿದರು. ಆದರೆ, ಇತ್ತೀಚೆಗೆ ಮಲ್ಲಿಗೆ ಪ್ರಿಯಕರೊನೊಂದಿಗೆ ಇರುವುದನ್ನು ಸುರೇಶ್ ಪತ್ತೆ ಹಚ್ಚಿದ ಬಳಿಕ ಪ್ರಕರಣಕ್ಕೆ ರೋಚಕ ತಿರುವು ದೊರೆತ್ತಿದೆ. ಹಾಗಿದ್ದಲ್ಲಿ ಪಿರಿಯಾಪಟ್ಟಣದಲ್ಲಿ ದೊರೆತ ಅಪರಿಚಿತ ಮಹಿಳೆಯ ಮೃತದೇಹ ಯಾವುದು? ಯಾರನ್ನು ರಕ್ಷಿಸಲು ಮಹಿಳೆಯ ಹತ್ಯೆ ಪ್ರಕರಣವನ್ನು ಪೊಲೀಸರು ಆದಿವಾಸಿಯ ತಲೆಗೆ ಕಟ್ಟಿದ್ದಾರೆ ಎಂಬ ಅನುಮಾನ ಇದೀಗ ಕಾಡುತ್ತಿದೆ.

ಪ್ರಕರಣದ ವಿಚಾರಣೆ ನಡೆಸುತ್ತಿರುವ 5ನೇ ಜೆಎಂಎಫ್‌ಸಿ ನ್ಯಾಯಾಲಯ ಪೊಲೀಸ್ ವ್ಯವಸ್ಥೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಪೊಲೀಸ್ ವ್ಯವಸ್ಥೆ ಬಗ್ಗೆ ಕಟುವಾದ ಶಬ್ದಗಳ ಮೂಲಕ ತರಾಟೆಗೆ ತೆಗೆದುಕೊಂಡಿದೆ. ‘ಪೊಲೀಸರು ಸುಳ್ಳು ದೋಷಾರೋಪ ಪಟ್ಟಿ ಸಲ್ಲಿಸಿ ಅಮಾಯಕನ್ನು ಹಿಂಸಿಸಿ ಶಿಕ್ಷೆಗೆ ಗುರಿಪಡಿಸಿದ್ದಾರೆ. ಅಪರಿಚಿತ ಮಹಿಳೆ ಶವ ಪ್ರಕರಣವನ್ನು ಮುಚ್ಚಿ ಹಾಕುವ ಉದ್ದೇಶ ಅಡಗಿದೆ. ಇಡೀ ಪ್ರಕರಣದಲ್ಲಿ ಪೊಲೀಸರ ಬೇಜವಾಬ್ದಾರಿ ಎದ್ದು ಕಾಣುತ್ತಿದ್ದು, ನ್ಯಾಯಾಲಯ ಸುಮೋಟೊ ಪ್ರಕರಣ ದಾಖಲಿಸಿಕೊಂಡು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು’ ಈ ವೇಳೆ ಆರೋಪಿ ಸುರೇಶ್ ಪರ ವಕೀಲ ಪಾಂಡು ಪೂಜಾರಿ ನ್ಯಾಯಾಲಯಕ್ಕೆ ಮನವಿ ಮಾಡಿದರು.

ವಿಚಾರಣೆ ನ್ಯಾಯಾಧೀಶರು ಏ.23ಕ್ಕೆ ತೀರ್ಪು ಕಾಯ್ದಿರಿಸಿದ್ದು, ಅಂದು ಆರೋಪಿ ಸುರೇಶ್ ಕುಟುಂಬ, ಪ್ರಕರಣದ ತನಿಖಾಧಿಕಾರಿಗಳು ಹಾಜರಿರುವಂತೆ ಆದೇಶಿಸಿದರು. ತನಿಖಾಧಿಕಾರಿಗಳಾದ ಸಿಪಿಐ ಬಿ.ಜಿ. ಪ್ರಕಾಶ್, ಎಸ್‌ಐ ಬಿ.ಕೆ. ಮಹೇಶ್ ಕುಮಾರ್, ಎಸ್‌ಐ ಪ್ರಕಾಶ್ ಎಂ. ಎತ್ತಿನಮನಿ, ನಿವೃತ್ತ ಎಎಸ್‌ಐ ಸೋಮಶೇಖರ್, ಆರೋಪಿ ಸುರೇಶ್, ಪತ್ನಿ ಮಲ್ಲಿಗೆ ವಿಚಾರಣೆಗೆ ಹಾಜರಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net