

ಬಾಳೆಹೊನ್ನೂರು: ಎನ್.ಆರ್.ಪುರ ತಾಲೂಕಿನ ಕರ್ಕೇಶ್ವರ ಗ್ರಾಮದಲ್ಲಿ ಅರಣ್ಯವನ್ನು ಒತ್ತುವರಿ ಮಾಡಿ ಅರಣ್ಯನಾಶ ಮಾಡಲಾಗಿದೆ ಎಂದು ವ್ಯಕ್ತಿಯೊಬ್ಬ ಜಿಲ್ಲಾಧಿಕಾರಿಗಳಿಗೆ ಸುಳ್ಳು ನೀಡಿದ್ದು, ಸುಳ್ಳು ದೂರು ನೀಡಿರುವ ವ್ಯಕ್ತಿ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ ಕರ್ಕೇಶ್ವರ ಗ್ರಾಮದ ಗ್ರಾಮಸ್ಥರು ಜಿಲ್ಲಾಧಿಕಾರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ಕರ್ಕೇಶ್ವರ ಗ್ರಾಮದಲ್ಲಿ ಸುಮಾರು 600ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿದ್ದು, ಇದೇ ಗ್ರಾಮದ ರವೀಂದ್ರ ಎಂಬ ವ್ಯಕ್ತಿ ಗ್ರಾಮಸ್ಥರ ಹೆಸರನ್ನು ದುರ್ಬಳಕೆ ಮಾಡಿಕೊಂಡು ಅರಣ್ಯ ಇಲಾಖೆ, ತಹಸೀಲ್ದಾರ್, ಜಿಲ್ಲಾಧಿಕಾರಿಗೆ ಏಕ ವ್ಯಕ್ತಿಯಾಗಿ ಗ್ರಾಮಸ್ಥರ ಹೆಸರಿನಲ್ಲಿ ಸುಳ್ಳು ದೂರು ನೀಡಿ ಗ್ರಾಮದಲ್ಲಿ ಅಶಾಂತಿಯ ವಾತಾವರಣ ಉಂಟು ಮಾಡುತ್ತಿದ್ದಾರೆ.
ಇತ್ತೀಚೆಗೆ ಕರ್ಕೇಶ್ವರ ಗ್ರಾಮದಲ್ಲಿ ಕೆಲ ವ್ಯಕ್ತಿಗಳು ಅರಣ್ಯ ಒತ್ತುವರಿ ಮಾಡಿ ನಾಶ ಮಾಡಿದ್ದಾರೆ ಎಂದು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದು, ಈ ಬಗ್ಗೆ ಕೆಲ ಮಾಧ್ಯಮಗಳಲ್ಲಿ ವರದಿ ಮಾಡಿಸಲಾಗಿದೆ. ಆದರೆ ಈ ಬಗ್ಗೆ ಗ್ರಾಮಸ್ಥರು ದೂರು ನೀಡಿಲ್ಲ ಹಾಗೂ ಗ್ರಾಮಸ್ಥರಿಗೆ ತಿಳಿದಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಈ ಬಗ್ಗೆ ಕೂಡಲೇ ತನಿಖೆ ನಡೆಸಿ ಸತ್ಯಾಸತ್ಯೆ ತಿಳಿಸಿ, ಸುಳ್ಳು ದೂರು ನೀಡಿದ ವ್ಯಕ್ತಿ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಕರ್ಕೇಶ್ವರ ಗ್ರಾಮದ ವ್ಯಕ್ತಿ ಸ್ಥಳೀಯ ಕರ್ಕೇಶ್ವರ ಗ್ರಾಪಂನ ಅಧಿಕಾರಿಗಳಿಗೂ ಸಹ ಕೆಲವು ವಿಚಾರವಾಗಿ ಸುಮ್ಮನೇ ಬೆದರಿಕೆ ಹಾಕಿ ಕರ್ತವ್ಯಕ್ಕೆ ಅಡ್ಡಿಪಡಿಸುತ್ತಿದ್ದು, ಗ್ರಾಪಂ ಸದಸ್ಯರ ಮೇಲೆ ದೂರು ನೀಡುವಂತೆ ಒತ್ತಾಯಿಸುತ್ತಿದ್ದಾರೆ. ಈ ವ್ಯಕ್ತಿ ಮೇಲೆ ಬಾಳೆಹೊನ್ನೂರು ಠಾಣೆಯಲ್ಲಿ ವಿವಿಧ ಪ್ರಕರಣಗಳು ದಾಖಲಾಗಿದ್ದು, ವೈಯಕ್ತಿಕ ಸ್ವಾರ್ಥಕ್ಕಾಗಿ ಗ್ರಾಮದ ನೆಮ್ಮದಿ ಹಾಳು ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಈ ಬಗ್ಗೆ ಕೂಲಂಕಶವಾಗಿ ಪರಿಶೀಲಿಸಿ ಆ ವ್ಯಕ್ತಿಯನ್ನು ಗ್ರಾಮದಿಂದ ಗಡಿಪಾರು ಮಾಡಲು ಪೊಲೀಸ್ ಇಲಾಖೆಗೆ ಶಿಾರಸ್ಸು ಮಾಡಬೇಕು ಎಂದು ಒತ್ತಾಯಿಸಿದ್ದಾರೆ ಎಂದು ಕರ್ಕೇಶ್ವರ ಗ್ರಾಪಂ ಅಧ್ಯಕ್ಷ ರಾಜೇಶ್ ಕೇಶವತ್ತಿ ತಿಳಿಸಿದ್ದಾರೆ.