

ಮಂಗಳೂರು: ಕಂಬಳ ಓಟಗಾರ ಶ್ರೀ ನಿವಾಸ ಗೌಡ, ಸ್ಕೈ ವ್ಯೂ ಸಂಸ್ಥೆಯ ಮುಖ್ಯಸ್ಥ ರತ್ನಾಕರ್ ಹಾಗೂ ತನ್ನ ವಿರುದ್ಧ ಲೋಕೇಶ್ ಶೆಟ್ಟಿ ಮುಚ್ಚೂರು ಅವರು ಮೂಡುಬಿದಿರೆ ಠಾಣೆಯಲ್ಲಿ ನೀಡಿರುವ ದೂರು ಅರ್ಜಿಯಲ್ಲಿರುವ ವಿಚಾರಗಳು ಸಂಪೂರ್ಣ ಸುಳ್ಳು ಎಂದು ಕಂಬಳ ಅಕಾಡೆಮಿ ಅಧ್ಯಕ್ಷ ಗುಣಪಾಲ ಕಡಂಬ ಹೇಳಿದ್ದಾರೆ. ಅರ್ಜಿಯಲ್ಲಿ ತಿಳಿಸಿದಂತೆ ಯಾವುದೇ ಮೋಸ ವಂಚನೆ ನಡೆದಿಲ್ಲ.ಕಂಬಳ ಅಕಾಡೆಮಿಯ ಚಟುವಟಿಕೆಗಳನ್ನು ಸಹಿಸದ ಮತ್ತು ನಮ್ಮ ವೈಯಕ್ತಿಕ ಶ್ರೇಯಸ್ಸನ್ನು ಸಹಿಸದ ಲೋಕೇಶ್ ಶೆಟ್ಟಿಯವರು ತೇಜೋವಧೆ ಮಾಡುವ ಉದ್ದೇಶದಿಂದ ದೂರು ನೀಡಿದ್ದಾರೆ. ಶ್ರೀ ನಿವಾಸ ಗೌಡರಿಗೆ 'ಕಂಬಳದ ಉಸೇನ್ ಬೋಲ್ಟ್' ಎಂದು ಪ್ರಚಾರ ಮಾಡಿರುವುದು ನಾವಲ್ಲ. ಇನ್ನೊಂದೆಡೆ ನಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದೆ ಎಂದು ಸಾಮಾಜಿಕ ಜಾಲತಾಣದ ಮೂಲಕ ಪ್ರಚಾರ ಮಾಡುತ್ತಿದ್ದು, ಇದು ಕೂಡಾ ಸುಳ್ಳು ಎಂದವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.ಸ್ಕೈವ್ಯೂ ಸಂಸ್ಥೆಯ ಮುಖ್ಯಸ್ಥ ರತ್ನಾಕರ್, ಅಕಾಡೆಮಿ ಸದಸ್ಯ ಸುರೇಶ್ ಉಪಸ್ಥಿತರಿದ್ದರು.