ಸುಳ್ಳು ಪ್ರಕರಣಗಳ ಹಿಂಪಡೆಯುವಂತೆ ಹಿಂದು ಜನಜಾಗೃತಿ ಸಮಿತಿ ಪ್ರತಿಭಟನೆ

Ballari Hindu Jagarana Vedike Protest
ಬಳ್ಳಾರಿಯಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಹಿಂದು ಜನಜಾಗೃತಿ ಸಮಿತಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಮುಖಂಡರು ಸೋಮವಾರ ಪ್ರತಿಭಟನೆ ನಡೆಸಿದರು.
Published on

ಹೊಸಪೇಟೆ: ಹಿಂದು ಪರ ಸಂಘಟನೆಗಳ ಕಾರ್ಯಕರ್ತರ ಮೇಲಿನ ಸುಳ್ಳು ಪ್ರಕರಣಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ಹಿಂದು ಜನಜಾಗೃತಿ ಸಮಿತಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಮುಖಂಡರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಹಿಂದು ಪರ ಸಂಘಟನೆಗಳ ಕಾರ್ಯಕರ್ತರ ಮೇಲೆ ನಾನಾ ರೀತಿಯಲ್ಲಿ ದಾಳಿ ನಡೆಸಲಾಗುತ್ತಿದೆ. ಜೈನಮುನಿ ಆಚಾರ್ಯ ಕಾಮಕುಮಾರ ನಂದಿ ಮಹಾರಾಜರು ಮತ್ತು ಯುವ ಬ್ರಿಗೇಡ್‌ನ ವೇಣುಗೋಪಾಲ ಹತ್ಯೆ ಸೇರಿದಂತೆ ಹಲವಾರು ಘಟನೆಗಳು ಹಿಂದೂ ಸಮಾಜದಲ್ಲಿ ಭಯದ ವಾತಾವರಣ ನಿರ್ಮಾಣ ಮಾಡಿದೆ.

ಬಕ್ರೀದ್ ಸಮಯದಲ್ಲಿ ಬಾದಾಮಿ, ಶಿಕಾರಿಪುರ, ಶಿರಸಿ ಸೇರಿದಂತೆ ಹಲವೆಡೆ ಅಕ್ರಮವಾಗಿ ಗೋಹತ್ಯೆ ಮಾಡಿ, ಗೋವಿನ ಎಲಬುಗಳನ್ನು ದೇವಸ್ಥಾನ, ಹಿಂದು ಮನೆಗಳ ಎದುರು ಎಸೆದು ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದಿದ್ದಾರೆ. ಅಂತಹ ದುಷ್ಕರ್ಮಿಗಳ ವಿರುದ್ಧ ಯಾವುದೇ ಕ್ರಮ ಜರುಗಿಸದೇ, ಬೆಂಗಳೂರಿನಲ್ಲಿ ಪ್ರತಿ ಭಾನುವಾರ ನಡೆಯುತ್ತಿದ್ದ ನಾಗರಕಟ್ಟೆ ಪೂಜೆಗೆ ತಡೆಯೊಡ್ಡಿ ಪೊಲೀಸರು ನೋಟಿಸ್ ಜಾರಿ ಮಾಡುವ ಮೂಲಕ ತಾರತಮ್ಯ ಅನುಸರಿಸಿದ್ದಾರೆ. ಹಿಂದು ಧರ್ಮದ ರಕ್ಷಣೆಗಾಗಿ ಹೋರಾಟದಲ್ಲಿ ತೊಡಗಿದವರಿಗೆ ಭದ್ರತೆ ನೀಡುವ ಬದಲಿಗೆ ಸುಳ್ಳು ಕೇಸುಗಳನ್ನು ದಾಖಲಿಸುತ್ತಿದ್ದಾರೆ ಎಂದು ದೂರಿದರು.

‘ಲ್ಯಾಂಡ್ ಜಿಹಾದ್’ ಬೇಡ

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವಕ್ಫ್ ಬೋರ್ಡ್ ತನ್ನ ಕಾನೂನನ್ನು ದುರುಪಯೋಗ ಪಡಿಸಿಕೊಂಡು ಸರ್ಕಾರಿ ಮತ್ತು ಖಾಸಗಿ ಜಮೀನುಗಳನ್ನು ಸ್ವಾಧೀನಪಡಿಸಿಕೊಂಡಿದೆ. ಆ ಮೂಲಕ ದೇಶದಲ್ಲಿ 8 ಲಕ್ಷ ಎಕರೆ ಜಮೀನನ್ನು ಕಬಳಿಸಿದೆ. ಇದು ‘ಲ್ಯಾಂಡ್ ಜಿಹಾದ್’ ಆಗಿದ್ದು, ಕೂಡಲೇ ಈ ಕಾನೂನನ್ನು ರದ್ದುಗೊಳಿಸಬೇಕು. ಈಗಾಗಲೇ ಸ್ವಾಧೀನ ಪಡಿಸಿಕೊಂಡಿರುವ ಜಮೀನುಗಳನ್ನು ಮೂಲ ಮಾಲೀಕರಿಗೆ ಹಿಂದಿರುಗಿಸಬೇಕು.

ಜತೆಗೆ ದೇಶದಲ್ಲಿ ‘ಸಮಾನ ನಾಗರಿಕ ಕಾನೂನು’ ಜಾರಿಗೆ ತರುವ ಮೂಲಕ ಅಲ್ಪಸಂಖ್ಯಾತರ ಹೆಸರಿನಲ್ಲಿ ಜಾರಿಯಲ್ಲಿರುವ ಎಲ್ಲ ವಿಶೇಷ ಸೌಲಭ್ಯ, ಕಾನೂನು, ಆಯೋಗ, ಮಂಡಳಿ, ಸರ್ಕಾರಿ ಇಲಾಖೆಗಳನ್ನು ರದ್ದುಪಡಿಸಬೇಕು. ಭಾರತದ ಎಲ್ಲ ನಾಗರಿಕರಿಗೆ ಸಮಾನ ಅವಕಾಶಗಳನ್ನು ಕಲ್ಪಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ವಿಶ್ವ ಹಿಂದು ಪರಿಷತ್ ನಗರ ಅಧ್ಯಕ್ಷ ಶಾಂತಕುಮಾರ್ ಕುದ್ರಿಮೋತಿ, ಹನುಮಾನ ಮಿತ್ರ ಮಂಡಲ ಅಧ್ಯಕ್ಷ ಕಮಲ ಜೈನ್, ಕೋಶಾಧ್ಯಕ್ಷ ನತ್ಮಲ್, ರಜಪೂತ್ ಸಮಾಜ ಚಂದನ್ ಸಿಂಗ್, ರಾಜ್ ಪುರೋಹಿತ್ ಸಮಾಜದ ಜಬ್ಬಾರ್ ಸಿಂಗ್, ನರಪತ ಸಿಂಗ ರಾಜಪುರೋಹಿತ್, ಶ್ರೀರಾಮ್ ಸೇನೆಯ ಪ್ರಮುಖ ಸಂಜೀವ್ ಮರಡಿ, ಮಹೇಶ್ ಟಿ.ಎಸ್.ರೇವಣಸಿದ್ದಯ್ಯ, ವಿರೂಪಾಕ್ಷ, ವೇಣುಗೋಪಾಲ್, ನಾಗರಾಜ, ರಾಘವೇಂದ್ರ, ಮಲ್ಲಿಕಾರ್ಜುನ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net