ಮುಖ್ಯಮಂತ್ರಿ ವಿರುದ್ಧ ಸುಳ್ಳು ಆರೋಪ: ಆರ್‌ಟಿಐ ಕಾರ್ಯಕರ್ತರ ವಿರುದ್ಧ ಕಾಂಗ್ರೆಸ್ ದೂರು

mysore
Published on

ಮೈಸೂರು: ಮುಖ್ಯಮಂತ್ರಿ ವಿರುದ್ಧ ಸುಳ್ಳು ಆರೋಪ ಮಾಡುತ್ತಿರುವ ಆರ್‌ಟಿಐ ಕಾರ್ಯಕರ್ತರಾದ ಗಂಗರಾಜು, ಸ್ನೇಹಮಹಿ ಕೃಷ್ಣ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಅವರಿಗೆ ದೂರು ನೀಡಲಾಗಿದೆ.


ಸಿದ್ದರಾಮಯ್ಯ ಪತ್ನಿ ಅವರ 3.16 ಎಕರೆ ಜಾಗವನ್ನು ಮುಡಾ ಅಧಿಸೂಚನೆ ಹೊರಡಿಸದೆ ವಶಪಡಿಸಿಕೊಂಡು ಕಾನೂನು ಬಾಹಿರವಾಗಿ ಇವರ ಜಮೀನಿನಲ್ಲಿ ನಿವೇಶನ ಮಾಡಿ ಜನರಿಗೆ ಹಂಚಿದೆ. ಮುಡಾ ಮಾಡಿರುವ ತಪ್ಪನ್ನು ಒಪ್ಪಿಕೊಂಡು ಕಾನೂನಿನ ಅಡಿಯಲ್ಲಿ 50:50 ಅನುಪಾತದಂತೆ ಸಿಎಂ ಪತ್ನಿಗೆ ಪರ್ಯಾಯವಾಗಿ ನಿವೇಶನಗಳನ್ನು ಪರಿಹಾರ ರೂಪದಲ್ಲಿ ನೀಡಲಾಗಿದೆ ಎಂದು ಇವರು ಸುಳ್ಳು ಆರೋಪ ಮಾಡಿದ್ದಾರೆ. ಈ ಕುರಿತು ನಕಲಿ ದಾಖಲೆ ಪ್ರದರ್ಶಿಸಿ ಕಳೆದ 20 ದಿನಗಳಿಂದ ನಿರಂತರವಾಗಿ ಸುದ್ದಿಯನ್ನು ಹಬ್ಬಿಸುತ್ತಿದ್ದಾರೆ ಎಂದು ಮನವಿಯಲ್ಲಿ ದೂರಲಾಗಿದೆ.


ಇವರಲ್ಲಿ ದಾಖಲೆಗಳಿದ್ದರೆ ಅವುಗಳನ್ನು ನ್ಯಾಯಾಂಗ ತನಿಖೆಗೆ ನೇಮಿಸಿರುವ ನಿವೃತ್ತ ನ್ಯಾಯಾಧೀಶರಿಗೆ ನೀಡಬೇಕು. ಅದನ್ನು ಬಿಟ್ಟು ಬಿಜೆಪಿ, ಜೆಡಿಎಸ್ ಮುಖಂಡರೊಂದಿಗೆ ಶಾಮೀಲಾಗಿ ಸಿಎಂ, ಅವರ ಕುಟುಂಬವನ್ನು ನಿರಂತರವಾಗಿ ನಿಂದಿಸಲಾಗುತ್ತಿದೆ. ಸುಳ್ಳ ಆರೋಪ ಮೂಲಕ ಅಪಪ್ರಚಾರ ಮಾಡಿ ಸಿಎಂ ಘನತೆಗೆ ಧಕ್ಕೆ ತರಲಾಗುತ್ತಿದೆ. ಅವರ ಕುಟುಂಬವನ್ನೂ ಕೆಟ್ಟದಾಗಿ ಬಿಂಬಿಸಲಾಗುತ್ತಿದೆ. ಆದ್ದರಿಂದ ಇವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದೂ ಆಗ್ರಹಿಸಲಾಗಿದೆ.


ಈ ಆರ್‌ಟಿಐ ಕಾರ್ಯಕರ್ತರ ಹೇಳಿಕೆಯ ಮೂಲಕ ನಾಡಿನ ಜನರಲ್ಲಿ ಕಿಚ್ಚು ಹತ್ತಿಸುವ ಪ್ರಯತ್ನಿಸಲಾಗುತ್ತಿದೆ. ಇದರಿಂದ ಕಾಂಗ್ರೆಸ್ ಕಾರ್ಯಕರ್ತರ ಸಹನೆ ಮೀರುತ್ತಿದೆ. ಆದ್ದರಿಂದ ಇಂತಹ ವ್ಯಕ್ತಿಗಳ ವಿರುದ್ಧ ಕ್ರಮ ವಹಿಸಬೇಕು. ಇಲ್ಲವಾದರೆ ಸಮಾಜದಲ್ಲಿ ಅಶಾಂತಿ ಸೃಷ್ಟಿಸಿ, ಇವರ ರಹಸ್ಯ ಅಜೆಂಡಾವನ್ನು ಗಲಾಟೆಗಳ ಮೂಲಕ ಈಡೇರಿಸಿಕೊಳ್ಳುವ ಪ್ರಯತ್ನಕ್ಕೆ ಉತ್ತೇಜನ ಕೊಟ್ಟಂತಾಗುತ್ತದೆ. ಆದ್ದರಿಂದ ತಕ್ಷಣ ಕ್ರಮ ವಹಿಸಬೇಕು ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ನಗರಾಧ್ಯಕ್ಷ ಆರ್.ಮೂರ್ತಿ, ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net