

ಜರ್ಮನಿಯ ಫಾಲಿಂಗ್ ವಾಲ್ಸ್ ಪ್ರತಿಷ್ಠಾನ ಪ್ರಕಟಿಸುವ ಪ್ರಮುಖ ವೈಜ್ಞಾನಿಕ ಬೆಳವಣಿಗೆಗಳ (Falling Walls Science Breakthroughs of the Year) ಪಟ್ಟಿಯಲ್ಲಿ ವಿಜ್ಞಾನ ಸಂವಹನ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಇಬ್ಬರು ಕನ್ನಡಿಗರು ಸ್ಥಾನಪಡೆದಿದ್ದಾರೆ. ಶ್ರೀ ಕೊಳ್ಳೇಗಾಲ ಶರ್ಮ ಹಾಗೂ ಟಿ. ಜಿ. ಶ್ರೀನಿಧಿ ಈ ಮನ್ನಣೆಗೆ ಪಾತ್ರರಾಗಿದ್ದು 2020ನೇ ಸಾಲಿನ ಫಾಲಿಂಗ್ ವಾಲ್ಸ್ ಪಟ್ಟಿಯ ಸೈನ್ಸ್ ಎಂಗೇಜ್‌ಮೆಂಟ್ ವಿಭಾಗದಲ್ಲಿ ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದಾರೆ.
ಜರ್ಮನಿಯಲ್ಲಿ ನಡೆಯುವ ಪ್ರತಿಷ್ಠಿತ ಫಾಲಿಂಗ್ ವಾಲ್ಸ್ ವಾರ್ಷಿಕ ಸಮ್ಮೇಳನದ ಅಂಗವಾಗಿ ಈ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಕರೊನಾವೈರಸ್ ಜಾಗತಿಕ ಸೋಂಕಿನ ಹಿನ್ನೆಲೆಯಲ್ಲಿ ಈ ವರ್ಷದ ಸಮ್ಮೇಳನವನ್ನು ನ.1 ರಿಂದ 10ರವರೆಗೆ ಡಿಜಿಟಲ್ ರೂಪದಲ್ಲಿ ನಡೆಸಲಾಗುತ್ತಿದೆ.
ಸಮ್ಮೇಳನ ಜಾಲತಾಣದ ಕೊಂಡಿ ಇಲ್ಲಿದೆ:
ಜರ್ಮನಿಯ ಬರ್ಲಿನ್ ಗೋಡೆಯನ್ನು ಕೆಡವಲಾಗಿದ್ದರ ನೆನಪಿನಲ್ಲಿ ನಡೆಯುವ ಈ ಸಮ್ಮೇಳನವು ವಿಜ್ಞಾನ ಪ್ರಸಾರಕ್ಕಿರುವ ಅಡ್ಡಗೋಡೆಗಳನ್ನು ನಿವಾರಿಸುವ ಉದ್ದೇಶ ಹೊಂದಿದೆ. ಈ ಸಮ್ಮೇಳನದ ಅಂಗವಾಗಿ ವರ್ಷದ ಪ್ರಮುಖ ವೈಜ್ಞಾನಿಕ ಬೆಳವಣಿಗೆಗಳ ಪಟ್ಟಿಯನ್ನು ಪ್ರಕಟಿಸಲಾಗಿದ್ದು ವಿಶ್ವದೆಲ್ಲೆಡೆಯ ಹಲವು ವಿಜ್ಞಾನಿಗಳು, ತಂತ್ರಜ್ಞರು, ವಿಜ್ಞಾನ ಸಂವಹನಕಾರರು ಅದರಲ್ಲಿ ಸ್ಥಾನ ಪಡೆದಿದ್ದಾರೆ. ಅಂತಿಮ ಸುತ್ತಿನ ಈ ಪಟ್ಟಿಯಿಂದ 10 ವಿಜೇತರನ್ನು ಆಯ್ಕೆಮಾಡಿ ನವೆಂಬರ್ 8ರಂದು ಪ್ರಕಟಿಸಲಾಗುವುದು.
ಕೊಳ್ಳೇಗಾಲ ಶರ್ಮ:
ಹಿರಿಯ ವಿಜ್ಞಾನ ಸಂವಹನಕಾರರಾದ ಶ್ರೀ ಕೊಳ್ಳೇಗಾಲ ಶರ್ಮರಿಗೆ ವಿಜ್ಞಾನ ಸಂವಹನದಲ್ಲಿ ಹಲವು ದಶಕಗಳ ಅನುಭವವಿದೆ. ಮೈಸೂರಿನ ಕೇಂದ್ರೀಯ ಆಹಾರ ವಿಜ್ಞಾನ ಸಂಶೋಧನಾಲಯದಲ್ಲಿ ವಿಜ್ಞಾನಿಯಾಗಿರುವ ಅವರು ಈವರೆಗೆ ಸಾವಿರಾರು ಜನಪ್ರಿಯ ವಿಜ್ಞಾನ ಲೇಖನ ಹಾಗೂ ಅಂಕಣ ಬರಹಗಳನ್ನು, ಹಲವು ಪುಸ್ತಕಗಳನ್ನು ರಚಿಸಿದ್ದಾರೆ. ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ದಾರ್ಶನಿಕ ಸಮೂಹದ ಪ್ರಶಸ್ತಿಗಳನ್ನು ಪಡೆದಿರುವ ಶರ್ಮ ತಮ್ಮ 'ಜಾಣಸುದ್ದಿ' ಪಾಡ್‌ಕಾಸ್ಟ್ ಸರಣಿಯಿಂದ ಜನಪ್ರಿಯರು. ಕಳೆದ ನಾಲ್ಕು ವರ್ಷಗಳಿಂದ ವಿಜ್ಞಾನದ ವಿಷಯಗಳನ್ನು ಧ್ವನಿರೂಪದಲ್ಲಿ ತಲುಪಿಸುತ್ತಿರುವ 'ಜಾಣಸುದ್ದಿ' ಸಂಚಿಕೆಗಳು ಇದೀಗ ಪ್ರತಿದಿನವೂ ಪ್ರಕಟವಾಗುತ್ತಿವೆ ಹಾಗೂ ಕನ್ನಡದಲ್ಲಿ ವಿಜ್ಞಾನ ಸಂವಹನಕ್ಕೆ ಹೊಸದೊಂದು ಆಯಾಮವನ್ನು ಕಟ್ಟಿಕೊಟ್ಟಿವೆ. ಈ ಸರಣಿಗಾಗಿಯೇ ಶರ್ಮ ಅವರಿಗೆ ಫಾಲಿಂಗ್ ವಾಲ್ಸ್ ಮನ್ನಣೆ ದೊರೆತಿದೆ.
ಟಿ. ಜಿ. ಶ್ರೀನಿಧಿ:
ಟಿ. ಜಿ. ಶ್ರೀನಿಧಿ 2007ರಲ್ಲಿ ಪ್ರಾರಂಭಿಸಿದ ಇಜ್ಞಾನ ಜಾಲತಾಣದ ಮೂಲಕ ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದ ವಿಷಯಗಳನ್ನು ಕನ್ನಡದ ಓದುಗರಿಗೆ ತಲುಪಿಸುವ