

ಹನೂರು: ತಾಲೂಕಿನ ಮಲೆಮಹದೇಶ್ವರ ಬೆಟ್ಟ ಸಮೀಪದ ಕಾಡೋಲ ಗ್ರಾಮದಲ್ಲಿ ಭಾನುವಾರ ಬಾಲಕನೊಬ್ಬ ಮಾವಿನ ಹಣ್ಣನ್ನು ಕೀಳಲು ಹೋಗಿ ಮರದಿಂದ ಆಯತಪ್ಪಿ ಬಿದ್ದು ಗಾಯಗೊಂಡಿದ್ದಾನೆ.
ಗ್ರಾಮದ ರಂಜಿತ್ (13) ಗಾಯಗೊಂಡ ಬಾಲಕ. ಈತ ಮಧ್ಯಾಹ್ನ 12ರ ವೇಳೆಯಲ್ಲಿ ಮನೆಯ ಮುಂಭಾಗದಲ್ಲಿದ್ದ ಮಾವಿನ ಮರದಲ್ಲಿ ಹಣ್ಣನ್ನು ಕೀಳಲು ಮೇಲೆ ಹತ್ತಿದ್ದನು. ಈ ವೇಳೆ ಆಯತಪಿ ಬಿದ್ದು, ಮುಖ ಹಾಗೂ ಕಾಲುಗಳಿಗೆ ತೀವ್ರ ಪೆಟ್ಟಾಗಿದೆ. ಕೂಡಲೇ ಕುಟುಂಬಸ್ಥರು ಹಾಗೂ ಸ್ಥಳೀಯರು ಈತನನ್ನು ಮ.ಬೆಟ್ಟದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರವಾನಿಸಿ ಪ್ರಥಮ ಚಿಕಿತ್ಸೆ ಕೊಡಿಸಿದರು. ತುರ್ತು ವಾಹನ ಸೇವೆಗೆ ಲಭ್ಯವಿಲ್ಲದ ಪರಿಣಾಮ ಬಾಲಕನನ್ನು ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ವಾಹನದ ಮೂಲಕ ತಮಿಳುನಾಡಿನ ಆಸ್ಪತ್ರೆಗೆ ಕರೆದೊಯ್ಯಲಾಯಿತು. ತುರ್ತು ವಾಹನ ಸೇವೆ ದೊರಕದಿರುವ ಬಗ್ಗೆ ಸ್ಥಳೀಯರಿಂದ ತೀವ್ರ ಆಕ್ಷೇಪ ವ್ಯಕ್ತವಾಯಿತು.