

ಹನೂರು: ಪಟ್ಟಣದಿಂದ ಲೊಕ್ಕನಹಳ್ಳಿಗೆ ಸಂಪರ್ಕ ಕಲ್ಪಿಸುವ ಮಾರ್ಗಮಧ್ಯೆ ಮಂಗಳವಾರ ಒಣ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದ ಪರಿಣಾಮ ವಾಹನ ಸಂಚಾರಕ್ಕೆ ತೊಡುಕಾಗಿತ್ತು.
ಈ ಮಾರ್ಗದ ರಸ್ತೆ ಬದಿಯಲ್ಲಿ ಸುಮಾರು 30ಕ್ಕೂ ಹೆಚ್ಚು ಒಣಗಿದ ಮರಗಳಿದ್ದು, ಅನಾಹುತಕ್ಕೆ ಆಹ್ವಾನ ನೀಡುತ್ತಿವೆ. ಒಣ ಮರಗಳನ್ನು ತೆರೆವುಗೊಳಿಸುವಂತೆ ಈ ಭಾಗದ ಗ್ರಾಮಸ್ಥರು ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಹಲವು ವರ್ಷದಿಂದಲೂ ಒತ್ತಾಯಿಸುತ್ತಲೇ ಇದ್ದಾರೆ. ಆದರೆ ಈ ಕಾರ್ಯವಾಗಿಲ್ಲ. ಪರಿಣಾಮ ಮಂಗಳವಾರ ಮಧ್ಯಾಹ್ನ 3ರ ವೇಳೆಯಲ್ಲಿ ಜೋರು ಗಾಳಿಗೆ ಚಿಕ್ಕಮಾಲಾಪುರಕ್ಕೆ ತೆರಳುವ ಅಡ್ಡರಸ್ತೆಯ ಸಮೀಪದಲ್ಲಿ ಬೃಹತ್ ಗಾತ್ರದ ಒಣಗಿದ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದಿದೆ. ಸದ್ಯ ಅದೃಷ್ಟವಶಾತ್ ಈ ವೇಳೆ ವಾಹನ ಸಂಚಾರ ಇಲ್ಲದಿದ್ದರಿಂದ ಸಂಭವಿಸಬಹುದಾದ ಅನಾಹುತ ತಪ್ಪಿದೆ. ಮರ ಬಿದ್ದ ಬಳಿಕ ಆಗಮಿಸಿದ ವಾಹನಗಳ ಸಂಚಾರಕ್ಕೆ ತೊಡುಕಾಗಿ ಪರಿಣಮಿಸಿದ್ದು, ಸವಾರರು ತೊಂದರೆ ಅನುಭವಿಸಿದರು.
ಇದೇ ವೇಳೆ ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ಪಿ.ಜಿ. ಪಾಳ್ಯ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂತೋಷ್ ಅವರು ವಾಹನಗಳ ಸಂಚಾರಕ್ಕೆ ತೊಡುಕಾಗಿರುವುದನ್ನು ಗಮನಿಸಿ ಸ್ಥಳೀಯರ ಸಹಕಾರದಿಂದ ಬಿದ್ದಿದ್ದ ಮರವನ್ನು ರಸ್ತೆ ಬದಿಗೆ ಸರಿಸಿದರು. ಒಣಗಿದ ಮರಗಳನ್ನು ತೆರೆವುಗೊಳಿಸದಿರುವ ಅರಣ್ಯ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಸ್ಥಳೀಯರು ಸಮಾಧಾನ ವ್ಯಕ್ತಪಡಿಸಿದರು.