ನೆಲಕ್ಕುರುಳಿದ ಮೆಕ್ಕೆಜೋಳ ಬೆಳೆ

12MDG3 MALE
Published on

ಮುಂಡರಗಿ: ಪಟ್ಟಣ ಸೇರಿ ತಾಲೂಕಿನ ವಿವಿಧ ಭಾಗದಲ್ಲಿ ಸೋಮವಾರ ರಾತ್ರಿ ಮತ್ತು ಮಂಗಳವಾರ ಮಳೆ ಸುರಿಯಿತು. ಮಳೆ, ಗಾಳಿಗೆ ಗೋವಿನಜೋಳ ಬೆಳೆ ನೆಲಕ್ಕುರುಳಿದೆ.

ತಾಲೂಕಿನ ಮಕ್ತುಂಪೂರ ಗ್ರಾಮದಲ್ಲಿ ಗೋವಿನಜೋಳ ತೆನೆ ಬಿಡುವ ಹಂತದಲ್ಲಿರುವಾಗಲೇ ನೆಲ ಕಚ್ಚಿವೆ. ರೈತ ಗುರಪ್ಪ ಇಟಗಿ ಅವರ ಜಮೀನಿನಲ್ಲಿ ಸುಮಾರು 8 ಎಕರೆ ಗೋವಿನಜೋಳ ಬಿತ್ತನೆ ಮಾಡಿದ್ದು, ಅಂದಾಜು ಒಂದೂವರೆ ಲಕ್ಷ ರೂ.ಖರ್ಚು ಮಾಡಿದ್ದು ಈ ರೀತಿ ಬೆಳೆ ನಷ್ಟವಾದರೆ ಭರಿಸುವುದಾದರೂ ಹೇಗೆ ಎಂದು ಗೋಳು ತೋಡಿಕೊಂಡರು.

ತಿಪ್ಪಾಪೂರ ಭಾಗದಲ್ಲಿ ಗೋವಿನಜೋಳಕ್ಕೆ ತೇವಾಂಶ ಹೆಚ್ಚಳವಾಗಿದೆ. ಎಲೆಗಳು ಹಳದಿ ಬಣಕ್ಕೆ ತಿರುಗಿದೆ. ತಾಲೂಕಿನ ಹಲವು ಭಾಗದಲ್ಲಿ ರೈತರು ಅತಿಯಾದ ಮಳೆಯಿಂದ ಬೆಳೆ ನಷ್ಟಕ್ಕೆ ತುತ್ತಾಗುವ ಆತಂಕ ಮನೆಮಾಡಿದೆ.

ಗಾಳಿ, ಮಳೆಗೆ ಬೆಳೆ ನೆಲ ಕಚ್ಚಿದ್ದು ಕಂಡ ಮನಸ್ಸಿಗೆ ಬಾಳ ನೋವಾಗಿದೆ. ಸಾಲ ಮಾಡಿ ಬೀಜ ಗೊಬ್ಬರ ತಂದು ಹಾಕಿದ್ದೇವೆ. ಮೊದಲು ಮಳೆ ಹೋಗಿ ಬೆಳೆ ಬಾಡುತ್ತಿತ್ತು. ಇದೀಗ ವಿಪರೀತ ಮಳೆ, ಗಾಳಿಗೆ ಬೆಳೆ, ಫಸಲು ಹಾಳಾಗುತ್ತಿದೆ. ಸಂಬಂಧ ಪಟ್ಟವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸೂಕ್ತ ಪರಿಹಾರ ಕಲ್ಪಿಸಿಕೊಡಬೇಕು ಎಂದು ರೈತ ಗುರಪ್ಪ ಇಟಗಿ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net