ಮಣ್ಣಿನ ಸವಕಳಿ ತಡೆಯಲು ಮಾಗಿ ಉಳುಮೆ ಅವಶ್ಯಕ

IMG-20250502-WA0232
Published on

ಆಲೂರು: ಮುಂಗಾರು ಹಂಗಾಮು ಪ್ರಾರಂಭದ ಮೊದಲು ಜಮೀನನ್ನು ಉಳುಮೆ ಮಾಡಬೇಕು. ಮಾಗಿ ಉಳುಮೆ ಮಾಡುವುದರಿಂದ ಹೊಲದ ಮಣ್ಣಿನ ಸವಕಳಿ ತಡೆದು ಅದರ ಫಲವತ್ತತೆ ಹೆಚ್ಚಳವಾಗಲು ಸಹಕಾರಿಯಾಗುತ್ತದೆ ಎಂದು ತಾಲೂಕು ಸಹಾಯಕ ಕೃಷಿ ನಿರ್ದೇಶಕ ಎಚ್.ಆರ್.ರಮೇಶ್‌ಕುಮಾರ್ ಹೇಳಿದ್ದಾರೆ.

ಭೂಮಿಯಲ್ಲಿ ಅತ್ಯಂತ ಸಹಜವಾಗಿ ನೀರು ಇಂಗಿಸುವ ವಿಧಾನವೆಂದರೆ ಮಾಗಿ ಉಳುಮೆ, ಇಳಿಜಾರಿಗೆ ಅಡ್ಡಲಾಗಿ ಉಳುಮೆ ಮಾಡುವುದರಿಂದ ಮಣ್ಣಿನ ಸವಕಳಿ ತಡೆದು ಅದರ ಫಲವತ್ತತೆ ಉಳಿಸಬಹುದು. ಹದವಾಗಿ ಉಳುಮೆ ಮಾಡುವುದರಿಂದ ಹೆಂಟೆಗಳು ಒಡೆಯತ್ತವೆ. ಮಣ್ಣಿನ ಕಣಗಳ ರಚನೆಯು ಸುಧಾರಿಸುತ್ತದೆ. ಈ ವಿಧಾನದಿಂದ ಮಣ್ಣು ಸಡಿಲವಾಗುವ ಕಾರಣ ಬಿದ್ದ ಮಳೆ ನೀರು ಭೂಮಿಯ ಹೊರ ಪದರದಲ್ಲಿ ಹರಿದು ಹೋಗದೆ ಒಳಗೆ ಇಳಿಯುತ್ತದೆ. ಇದರಿಂದ ಜಮೀನು ತೇವಾಂಶದಿಂದ ಕೂಡಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾಗಿ ಉಳುಮೆ ಮಾಡುವುದರಿಂದ ಮಣ್ಣಿನ ಕೆಳ ಪದರದಲ್ಲಿರುವ ರೋಗಾಣುಗಳ ಶಿಲೀಂಧ್ರಗಳು, ಕೀಟಗಳು ಮತ್ತು ಅವುಗಳ ಮೊಟ್ಟೆಗಳು, ಕೋಶಗಳು ಬಿಸಿಲಿಗೆ ನಾಶವಾಗುವುದರ ಜತೆಗೆ ಪಕ್ಷಿಗಳಿಗೆ ಆಹಾರವಾಗುತ್ತವೆ. ಬೆಳೆಗಳ ತ್ಯಾಜ್ಯ ವಸ್ತುಗಳಾದ ಬೇರು, ಕಾಂಡ, ಇತರ ಸಸ್ಯದ ಭಾಗಗಳು ಭೂಮಿಯ ಒಳಗಡೆ ಸೇರಿ ಕೊಳೆಯುವಿಕೆಗೆ ಸಹಕಾರಿಯಾಗುತ್ತದೆ ಎಂದು ವಿವರಿಸಿದ್ದಾರೆ.

ಬೆಳೆ ಉಳಿಕೆಗಳು ಬೆಳೆ ಕಟಾವಿನ ನಂತರ ಉಳಿದ ಬೆಳೆ ಉಳಿಕೆಗಳು ಮತ್ತು ತ್ಯಾಜ್ಯ ವಸ್ತುಗಳು ಮಣ್ಣಿನಲ್ಲಿ ಬೇಗನೆ ಕೊಳೆತು ಉತ್ತಮ ಸಾವಯವ ಗೊಬ್ಬರವಾಗಿ ಮುಂಬರುವ ಬೆಳೆಗಳಿಗೆ ಪೂರೈಕೆಯಾಗುದೆ ಮತ್ತು ಕೃಷಿ ಪರಿಸರದಲ್ಲಿ ಸಾವಯವ ಪದಾರ್ಥಗಳಿಂದ ಮಣ್ಣಿನ ಭೌತಿಕ ರಾಸಾಯನಿಕ ಗುಣ ಧರ್ಮಗಳು ಉತ್ತಮಗೊಳ್ಳುತ್ತದೆ. ನೈಸರ್ಗಿಕ ಹಾಗೂ ಜೈವಿಕ ಪರಿಸರದ ಮೇಲೆ ಪರಿಣಾಮ ಮಾಗಿ ಉಳುಮೆಯಿಂದ ಕೀಟಗಳ ಕೋಶಗಳು ಮತ್ತು ರೋಗಾಣುಗಳನ್ನು ಕೊಕ್ಕರೆ ಮತ್ತು ಮುಂತಾದ ಪಕ್ಷಿಗಳು ಹೆಕ್ಕಿ ತಿನ್ನುತ್ತವೆ. ಇದರಿಂದ ಜೈವಿಕವಾಗಿ ಕೀಟ ಮತ್ತು ರೋಗಗಳನ್ನು ಹತೋಟಿ ಮಾಡಿ ಮಣ್ಣಿನ ಆರೋಗ್ಯ ಪರಿಸರ ಮತ್ತು ಆಹಾರದಲ್ಲಿ ರಾಸಾಯನಿಕಗಳ ಪ್ರಯೋಜನವನ್ನು ಕಡಿಮೆಗೊಳಿಸಬಹುದಾಗಿದೆ. ಸೂರ್ಯನ ಬೆಳಕು ಬೀಳುವುದರಿಂದ ಮಣ್ಣಿನ ಶಕ್ತಿ ವೃದ್ಧಿಸುತ್ತದೆ. ಹೀಗಾಗಿ, ರೈತರು ಬೇಸಿಗೆಯಲ್ಲಿ ಮಾಗಿ ಉಳುಮೆ ಕೈಗೊಂಡು ನೈಸರ್ಗಿಕ ಹಾಗೂ ಜೈವಿಕ ವಿಧಾನಗಳಿಂದ ಪ್ರಕೃತಿ ದತ್ತವಾದ ಮಣ್ಣಿನ ಸಂಪತ್ತನ್ನು ಸಂರಕ್ಷಿಸಬಹುದಾಗಿದೆ. ಮಣ್ಣಿನ ಆರೋಗ್ಯ ಮತ್ತು ಫಲವತ್ತತೆಯನ್ನು ರಕ್ಷಿಸುವುದರ ಜತೆಗೆ ಕಡಿಮೆ ಖರ್ಚಿನ ಬೇಸಾಯವನ್ನು ಕೈಗೊಂಡು ತಮ್ಮ ಆದಾಯವನ್ನು ಸಹ ಹೆಚ್ಚಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net