

ಖಂಡೇನಹಳ್ಳಿ ಬಸವರಾಜ್ ಹಿರಿಯೂರು
ಕೃಷಿಕರ ಬದುಕು ಜೂಜಾಟ ಇದ್ದಂತೆ. ಬೆಲೆ ಹೆಚ್ಚಿದ್ದಾಗ ಇಳುವರಿಯೇ ಇರುವುದಿಲ್ಲ, ಬೆಳೆ ಕೈಗೆ ಸಿಕ್ಕಾಗ ಬೆಲೆ ಇರುವುದಿಲ್ಲ. ಜತೆಗೆ ವರುಣನ ಕಣ್ಣಾಮುಚ್ಚಾಲೆ ಆಟ.
ಕೃಷಿ ಕ್ಷೇತ್ರದಲ್ಲಿ ರೈತರು ಒಂದಿಲ್ಲೊಂದು ಪ್ರಯೋಗಕ್ಕೆ ಒಳಗಾಗಿ ನಷ್ಟ ಹೊಂದುವುದು ಸಾಮಾನ್ಯವಾಗಿದೆ. ಐದಾರು ವರ್ಷದ ಹಿಂದೆ ಚಿತ್ರದುರ್ಗ ಜಿಲ್ಲೆಯಲ್ಲಿ ದಾಳಿಂಬೆ ಬೆಳೆ ತೀವ್ರ ಸಂಚಲನ ಮೂಡಿಸಿತ್ತು.
ಆದರೆ, ಮಾರ್ಗದರ್ಶನದ ಕೊರತೆ, ಏಕಬೆಳೆ ಪದ್ಧತಿಯಿಂದ ಕೈಸುಟ್ಟುಕೊಂಡವರೇ ಹೆಚ್ಚು. ಕೆಲವರು ಸವಾಲುಗಳನ್ನು ಮೆಟ್ಟಿನಿಂತು ದಾಳಿಂಬೆ ಬೆಳೆದು ಕೋಟಿ ಕೋಟಿ ಹಣ ಸಂಪಾದಿಸಿದವರು, ಅಷ್ಟೇ ಸಂಖ್ಯೆಯಲ್ಲಿ ನಷ್ಟ ಅನುಭವಿಸಿದವರು ಇದ್ದಾರೆ.
ಈ ಮಧ್ಯೆ ದಾಳಿಂಬೆ ಹಣ್ಣಿಗೆ ಬಂಪರ್ ಬೆಲೆ ಆರಂಭದಲ್ಲಿಯೇ ದೊರೆತಿದ್ದು, ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಆದರೆ, ರೋಗಬಾಧೆಗೆ ಬಹಳಷ್ಟು ತೋಟಗಳು ನಾಶಗೊಂಡಿದ್ದು, ಉತ್ಪಾದನೆ ತೀವ್ರ ಕುಸಿತ ಕಂಡಿದೆ.
ರೋಗಬಾಧೆ, ಔಷಧ ಇತರೆ ಬೆಲೆ ಏರಿಕೆ ಹೀಗೆ ಅನೇಕ ಸವಾಲುಗಳ ಮಧ್ಯೆಯೂ ತೋಟಗಳನ್ನು ಉಳಿಸಿಕೊಂಡ ಬಯಲುಸೀಮೆ ರೈತರ ಮೊಗದಲ್ಲಿ ಬೆಲೆ ಏರಿಕೆ ಮಂದಹಾಸ ಮೂಡಿಸಿದೆ.
ರೈತರು ನೀರಿನ ಸಂಕಷ್ಟದ ನಡುವೆ ದಾಳಿಂಬೆ ಕೃಷಿಯಲ್ಲಿ ಯಶಸ್ಸು ಸಾಧಿಸುತ್ತಿದ್ದು, ಕೆಜಿಗೆ 80-90 ರೂ. ಇದ್ದ ಬೆಲೆ ಇದೀಗ 150 ರೂ. ಗೆ ಹೆಚ್ಚಿದೆ.
ಹಿರಿಯೂರು, ಚಳ್ಳಕೆರೆ, ಹೊಸದುರ್ಗ ಮೊಳಕಾಲ್ಮೂರು, ಶಿರಾ, ಪಾವಗಡ, ಮಧುಗಿರಿ ಇತರೆಡೆ ಉತ್ತಮ ಗುಣಮಟ್ಟದ ದಾಳಿಂಬೆ ಬೆಳೆಯಲಾಗುತ್ತದೆ.
ಬೆಂಗಳೂರಿನ ಮಾರುಕಟ್ಟೆಯಲ್ಲಿ ಚಿತ್ರದುರ್ಗ ಜಿಲ್ಲೆಯ ದಾಳಿಂಬೆಗೆ ಉತ್ತಮ ಬೇಡಿಕೆ ಇದೆ.
ಇತ್ತೀಚೆಗೆ ತಂತ್ರಜ್ಞಾನ, ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಂಡು ಸ್ಮಾರ್ಟ್ ಬೇಸಾಯ ಮೂಲಕ ಯಶಸ್ಸು ಸಾಧಿಸುತ್ತಿದ್ದಾರೆ.
ಕರೊನಾ-ಲಾಕ್‌ಡೌನ್ ಸಂಕಷ್ಟದ ಸಮಯದಲ್ಲಿ ಪಟ್ಟಣ ತೊರೆದು ಹಳ್ಳಿ ಸೇರಿ ದಾಳಿಂಬೆ ಕೃಷಿಯಲ್ಲಿ ತೊಡಗಿಸಿಕೊಂಡಿದ್ದ ಅನೇಕ ಯುವಪೀಳಿಗೆ ಮೊಗದಲ್ಲಿ ಈಗ ದಾಳಿಂಬೆ ಬೆಲೆ ಏರಿಕೆ ಆಶಾಭಾವನೆ ಮೂಡಿಸಿದೆ.
ತೋಟಗಾರಿಕೆ ಬೆಳೆಗಳ ತವರೂರು: ವಿವಿ ಸಾಗರ-ಗಾಯತ್ರಿ ಜಲಾಶಯ, ಬಬ್ಬೂರು ಕೃಷಿ ವಿಜ್ಞಾನ ಕೇಂದ್ರ ತಾಲೂಕಿನ ರೈತರ ಆಧಾರ ಸ್ತಂಭ. ಜಿಲ್ಲೆಯಲ್ಲಿ ಮೊದಲು ದಾಳಿಂಬೆ ಪರಿಚಯಿಸಿದ್ದು ಹಿರಿಯೂರು, ಬಳಿಕ ಹೊಸದುರ್ಗ ತಾಲೂಕಿನ ರೈತರು.
ದಾಳಿಂಬೆ ಬೆಳೆಯಲ್ಲಿ ಮುಂಚೂಣಿ ಸಾಧಿಸಿದ್ದರು. ಬಯಲುಸೀಮೆ ವಾತಾವರಣ ದಾಳಿಂಬೆ ಬೆಳೆ ಪೂರಕವಾಗಿದೆ.
ಸರ್ಕಾರ ವಿಫಲ: ರಾಜ್ಯದಲ್ಲಿಯೇ ಚಿತ್ರದುರ್ಗ ಜಿಲ್ಲೆ ದಾಳಿಂಬೆ ಬೆಳೆಯಲ್ಲಿ ಹೆಜ್ಜೆ ಗುರುತು ಮೂಡಿಸಿತ್ತು. ಆದರೆ, ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ ಸಂದರ್ಭದಲ್ಲಿ ಸರ್ಕಾರ ನೆರವಿಗೆ ಧಾವಿಸಲಿಲ್ಲ.
ಹೋಬಳಿ ಕೇಂದ್ರದಲ್ಲಿ ಕೋಲ್ಡ್ ಸ್ಟೋರೇಜ್, ದಾಳಿಂಬೆ ಘಟಕ ಸ್ಥಾಪನೆ, ಸ್ಥಿರ ಬೆಲೆ ನಿಗದಿ, ರಪ್ತು ಉತ್ತೇಜನ, ರೋಗ ನಿಯಂತ್ರಣಕ್ಕೆ ತಜ್ಞರ ನೇಮಕ, ಜಿಲ್ಲಾ ಕೇಂದ್ರದಲ್ಲಿ ಮಾರುಕಟ್ಟೆ ಸ್ಥಾಪನೆ ಮಾಡಬೇಕೆಂಬ ರೈತರ ಬೇಡಿಕೆ ಸಾಕಾರವಾಗಲಿಲ್ಲ.
ಜತೆಗೆ ರೋಗ-ಸಾಲಭಾದೆ, ಹವಾಮಾನ ಏರುಪೇರು, ನೀರಿನ ಕೊರತೆ. ಪರಿಣಾಮ ಶೇ.90ರಷ್ಟು ರೈತರು ದಾಳಿಂಬೆ ಕೃಷಿಯಿಂದ ಹಿಂದೆ ಸರಿದಿದ್ದಾರೆ.
ದಾಳಿಂಬೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ ಸಂದರ್ಭದಲ್ಲಿ ನೆರವಿಗೆ ಧಾವಿಸಲಿಲ್ಲ. ಬಜೆಟ್‌ನಲ್ಲಿ ರೈತಪರ ಯೋಜನೆ ಘೊಷಣೆಗೆ ಸೀಮಿತವಾಗಿವೆ. ದಶಕಗಳ ಹಿಂದೆ ಹೊಸದುರ್ಗ ತಾಲೂಕಿನಲ್ಲಿ 300-400 ಕೋಟಿ ರೂ. ದಾಳಿಂಬೆ ವಹಿವಾಟು ನಡೆಯುತ್ತಿತ್ತು, ಇಂದು ಬೆರಳೆಣೆಕೆ ಮಂದಿ ಮಾತ್ರ ಕಾಣುತ್ತಾರೆ.ಶ್ರೀ ಶಾಂತವೀರ ಸ್ವಾಮೀಜಿ, ಕುಂಚಿಟಿಗ ಮಠ, ಹೊಸದುರ್ಗ ಜಮೀನಿಗೆ ಭೇಟಿ ನೀಡಿ ಒಂದು ಕೆಜಿ ದಾಳಿಂಬೆ 150 ರೂ. ದರ ನಿಗದಿ ಮಾಡಿ ಖರೀದಿಸುತ್ತಿದ್ದು, ಮಾರುಕಟ್ಟೆಯಲ್ಲಿ 180 ರೂ. ಇದೆ. ಉತ್ಪಾದನೆ ಕುಸಿತ, ಬೇಡಿಕೆ ಹೆಚ್ಚಳದಿಂದ ಉತ್ತಮ ಬೆಲೆ ಬಂದಿದೆ. ಚಿತ್ರದುರ್ಗ ಜಿಲ್ಲೆಯ ದಾಳಿಂಬೆ ಹಣ್ಣುಗಳಿಗೆ ಕೇರಳ, ಕೋಲ್ಕತ್ತಾ, ದೆಹಲಿ, ತಮಿಳುನಾಡು, ಉತ್ತರ ಭಾರತದಲ್ಲಿ ಹೆಚ್ಚು ಬೇಡಿಕೆ ಇದೆ.ರಮೇಶ್, ಖರೀದಿದಾರ, ಬೆಂಗಳೂರು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರ ರೈತ ಸ್ನೇಹಿ ಯೋಜನೆ ಘೋಷಣೆಗೆ ಸೀಮಿತಗೊಳಿಸದೆ, ಕೃಷಿಕರ ಹಿತಕಾಯಬೇಕು. ಜತೆಗೆ ಬೆಳೆ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಬೇಕಿದೆ.ದೊಡ್ಡಯ್ಯ, ಬೆಳೆಗಾರ, ಮದ್ದಿಹಳ್ಳಿ ಚಿತ್ರದುರ್ಗ ಜಿಲ್ಲೆಯಲ್ಲಿ ಅಂದಾಜು 52,992 ಹೆಕ್ಟೇರ್ ಪ್ರದೇಶದಲ್ಲಿ ದಾಳಿಂಬೆ ಬೆಳೆಯಲಾಗುತ್ತಿದೆ. ಬ್ಯಾಕ್ಟೀರಿಯಲ್ ಬೈಟ್ ರೋಗ-ಹವಾಮಾನ ವೈಫರೀತ್ಯದಿಂದ ಉತ್ಪಾದನೆ ಕಡಿಮೆಯಾಗಿದೆ. ರೈತರನ್ನು ಪ್ರೋತ್ಸಾಯಿಸಲು ಇಲಾಖೆಯಿಂದ ವಿವಿಧ ಯೋಜನೆ ರೂಪಿಸಲಾಗಿದೆ. ಹನಿ ನೀರಾವರಿಗೆ ಸಹಾಯಧನ ನೀಡಲಾಗುತ್ತಿದೆ.ಡಾ.ಜಿ.ಸವಿತಾ, ಡಿಡಿ, ತೋಟಗಾರಿಕೆ ಇಲಾಖೆ, ಚಿತ್ರದುರ್ಗ