

ಬೀಳಗಿ: ಕೃಷಿ ಆಧಾರಿತ ಗ್ರಾಮೀಣ ಪ್ರದೇಶದ ಕೈಗಾರಿಕೆಯಾದ ದೇಶದ ಸಕ್ಕರೆ ಉದ್ಯಮ ತೊಂದರೆಯಲ್ಲಿದೆ. ಸಕ್ಕರೆಯಿಂದ ನೇರವಾಗಿ ವಾಹನಗಳಿಗೆ ಬಳಸುವ ಇಥೆನಾಲ್ ಇಂಧನ ಉತ್ಪಾದನೆ ಮಾಡಲು ಅವಕಾಶ ಕೊಡಬೇಕು ಎಂದು ಶಾಸಕ ಮುರುಗೇಶ ನಿರಾಣಿ ಹೇಳಿದರು.
ಸುದ್ದಿಗಾರರ ಜತೆ ಬುಧವಾರ ಮಾತನಾಡಿ, ವಿಮಾನ, ಯುದ್ಧ ವಿಮಾನ, ಹೆಲಿಕ್ಯಾಪ್ಟರ್‌ಗಳಿಗೆ ಇಂಧನವಾಗಿ ಇಥೆನಾಲ್ ಬಳಸಬಹುದು. ಸಕ್ಕರೆ ಸಂಗ್ರಹ ಹೆಚ್ಚಾಗಿದ್ದು ವಿದೇಶಿ ಬೇಡಿಕೆಯೂ ಕಡಿಮೆಯಾಗಿದೆ. ಮುಂದಿನ ಹಂಗಾಮಿಗೆ ಸಕ್ಕರೆ ಉತ್ಪಾದನೆ ಇನ್ನೂ ಹೆಚ್ಚಾಗಲಿದೆ. ಆದ್ದರಿಂದ ಈ ವಿಷಯ ಕುರಿತು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸುವುದು ಅವಶ್ಯವಿದೆ. ಹೊಸ ತಂತ್ರಜ್ಞಾನ ಬಹಳ ಬೆಳೆದಿದ್ದು ಸಮರ್ಪಕವಾಗಿ ಬಳಸಿದರೆ ಸಕ್ಕರೆ ಕೈಗಾರಿಕೆಗೆ ಅನುಕೂಲವಾಗುವುದು ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಸ್ವದೇಶಿ ವಸ್ತುಗಳ ಉತ್ಪಾದನೆ ಮತ್ತು ಬಳಸುವುದಕ್ಕೆ ಜನರು ಗಮನ ಕೊಡಬೇಕು ಎಂದು ಹೇಳಿರುವುದು ಭವ್ಯಭಾರತ ಕಟ್ಟುವ ಮಹತ್ವದ ಹೆಜ್ಜೆಯಾಗಿದೆ. ಕರೊನಾ ಸೋಂಕಿನ ಹಿನ್ನೆಲೆ ತಾಯ್ನಡಿಗೆ ಮರಳಿ ಬಂದ ಯುವಕರು ಭಾರತದಲ್ಲಿಯೇ ಉಳಿದು ಭವ್ಯ ಭಾರತ ಕಟ್ಟುವ ಸಂಕಲ್ಪ ಮಾಡಬೇಕು ಎಂದು ಹೇಳಿದರು.