

ಧಾರವಾಡ: ಶಾಸೀಯ ಸಂಗೀತ ಉಳಿದು, ಬೆಳೆಯಬೇಕಾದರೆ ಪ್ರೋತ್ಸಾಹದ ಅಗತ್ಯ ಇದೆ. ಮುಂದಿನ ಯುವ ಪೀಳಿಗೆಯ ಸಂಗೀತಗಾರರು ಇದನ್ನು ಮುಂದುವರಿಸಬೇಕಿದೆ. ಅದಕ್ಕೆ ನಾವೆಲ್ಲರೂ ಪ್ರಯತ್ನಿಸಬೇಕು ಎಂದು ಪದ್ಮಶ್ರೀ ಡಾ. ಎಂ. ವೆಂಕಟೇಶಕುಮಾರ ಹೇಳಿದರು.
ಹುಬ್ಬಳ್ಳಿಯ ಕ್ಷಮತಾ ಸಂಸ್ಥೆ ಹಾಗೂ ನಗರದ ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್ ವತಿಯಿಂದ ನಗರದ ಸೃಜನಾ ರಂಗಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಪ್ರಲ್ಹಾದ ಜೋಶಿ, ಅರವಿಂದ ಬೆಲ್ಲದ ಅವರಂಥ ಸಂಗೀತ ಪ್ರೇಮಿಗಳು ನಮ್ಮಲ್ಲಿದ್ದಾರೆ. ಅಲ್ಲದೆ, ಅನೇಕ ಸಂಗೀತ ಪ್ರೇಮಿಗಳು, ಪ್ರೋತ್ಸಾಹಕರು ಇದ್ದಾರೆ. ನನಗೂ ಅವರಿಗೂ ಸಂಬಂಧವಿಲ್ಲದಿದ್ದರೂ ಪ್ರೋತ್ಸಾಹ ನೀಡಿದ್ದಾರೆ. ಹೀಗೆ ಹುಬ್ಬಳ್ಳಿ- ಧಾರವಾಡದಲ್ಲಿ ಅನೇಕರು ಪ್ರೋತ್ಸಾಹಿಸಿದ್ದಾರೆ ಎಂದರು.
ಇದಕ್ಕೂ ಮೊದಲು ಪಂ. ವೆಂಕಟೇಶಕುಮಾರ ಜೀವನಾಧರಿತ ‘ನಾದದ ನವನೀತ’ ಸಾಕ್ಷ್ಯಚಿತ್ರ ಪ್ರದರ್ಶನಗೊಂಡಿತು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ಪಂ. ವೆಂಕಟೇಶಕುಮಾರ ಅತ್ಯಂತ ಸರಳ- ಸಜ್ಜನಿಕೆಯ ಸಾಧಕರು. ಎಂದೂ ಗರ್ವ ಪಡದೆ ಎತ್ತರಕ್ಕೆ ಬೆಳದವರು. ವ್ಯಕ್ತಿಯ ಸಾಧನೆಗೆ ಆತನ ಪತ್ನಿಯ ಸಹಕಾರ ಅತ್ಯಗತ್ಯ. ಈ ದಿಶೆಯಲ್ಲಿ ವೆಂಕಟೇಶಕುಮಾರ ಧನ್ಯರು ಎಂದರು.
ಕ್ಷಮತಾ ಸಂಸ್ಥೆಯ ಗೋವಿಂದ ಜೋಶಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ರಮಾಕಾಂತ ಜೋಶಿ, ಚಿತ್ರ ನಿರ್ದೇಶಕರಾದ ಗಿರೀಶ ಕಾಸರವಳ್ಳಿ, ಪಿ. ಶೇಷಾದ್ರಿ, ಕೊಳಲು ವಾದಕ ಪ್ರವೀಣ ಗೋಡಖಿಂಡಿ, ಸಮೀರ ಜೋಶಿ, ಗಣಪತಿ ಭಟ್ಟ ಹಾಸಣಗಿ, ಇತರರಿದ್ದರು.