

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಸಹಕಾರಿ ಸಂಘಗಳು ತನ್ನ ಸದಸ್ಯರೊಂದಿಗೆ ಅವಿನಾಭಾವ ಸಂಬಂಧ ಇಟ್ಟುಕೊಂಡು ಪರಿಪೂರ್ಣ ಸೇವೆ ನೀಡುವಲ್ಲಿ ಮುಂಚೂಣಿಯಲ್ಲಿವೆ. ವೇಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು ಕೃಷಿಕರಿಗೆ ಅನೇಕ ಸೌಲಭ್ಯಗಳನ್ನು ಒದಗಿಸಿ ಕೃಷಿಕರ ಬಾಳಿಗೆ ಬೆಳಕು ಮೂಡಿಸಿದೆ. ಸಹಕಾರಿ ಸಂಘಗಳು ಕೃಷಿಕರ ಪಾಲಿನ ಆಶಾಕಿರಣ ಎಂದು ಶಾಸಕ ಹರೀಶ್ ಪೂಂಜ ಬಣ್ಣಿಸಿದರು.
ವೇಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಕಟ್ಟಡ ‘ಫಲ್ಗುಣಿ’ಯನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು. ಸಂಘದ ಬೇಡಿಕೆಯಂತೆ 15 ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಿಸಿಕೊಡಲಾಗಿದೆ. ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಕಳೆದ ವರ್ಷ ತಾಲೂಕಿನ ರೈತರಿಗೆ 90 ಕೋಟಿ ರೂ. ಬೆಳೆ ವಿಮೆ ಸಿಕ್ಕಿದ್ದು, ಈ ಬಾರಿ 120 ಕೋಟಿ ರೂ.ಗೆ ಹೆಚ್ಚುವ ನಿರೀಕ್ಷೆ ಇದೆ ಎಂದರು.
ಭದ್ರತಾ ಕೊಠಡಿ ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಸಹಕಾರಿ ರಂಗವು ಗ್ರಾಮಗಳನ್ನು ಬೆಳೆಸುತ್ತಿರುವುದು ಶ್ಲಾಘನೀಯ. ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಸ್ಪರ್ಧೆ ನೀಡುತ್ತಿರುವ ಸಹಕಾರಿ ಸಂಘಗಳು ಆರ್ಥಿಕ ವ್ಯವಸ್ಥೆಗೆ ಮಹತ್ವದ ಕೊಡುಗೆ ನೀಡುವುದರೊಂದಿಗೆ ಗ್ರಾಹಕರಲ್ಲಿ ವಿಶ್ವಾಸ ಮೂಡಿಸುತ್ತಿದೆ ಎಂದು ಮೆಚ್ಚುಗೆ ಸೂಚಿಸಿದರು.
ಮೆಸ್ಕಾಂ ಅಧ್ಯಕ್ಷ ಕೆ.ಹರೀಶ್ ಕುಮಾರ್ ಗೋದಾಮು ಉದ್ಘಾಟಿಸಿದರು. ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೋಟ್ಟು ಮಾತನಾಡಿದರು. ಸಂಘದ ಅಧ್ಯಕ್ಷ ಸುಂದರ ಹೆಗ್ಡೆ ಬಿ.ಇ. ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಪಿ.ಕುಶಾಲಪ್ಪ ಗೌಡ, ಗ್ರಾಪಂ ಅಧ್ಯಕ್ಷೆ ಮಲ್ಲಿಕಾ ಹೆಗ್ಡೆ, ಕೆಎಂಎಫ್ ನಿರ್ದೇಶಕ ಪ್ರಭಾಕರ ಹುಲಿಮೇರು, ವೇಣೂರು ದಿಗಂಬರ ಜೈನ ತೀರ್ಥಕ್ಷೇತ್ರ ಸಮಿತಿ ಅಧ್ಯಕ್ಷ ಪ್ರವೀಣ್ ಕುಮಾರ್ ಇಂದ್ರ, ಖತೀಬ ಮುಹಮ್ಮದ್ ಶರಪುದ್ದೀನ್, ಸಂಘದ ಉಪಾಧ್ಯಕ್ಷ ರತ್ನಾಕರ ಬಿ., ನಿರ್ದೇಶಕರಾದ ರಾಮದಾಸ ನಾಯಕ್, ನಾಗಪ್ಪ, ಪ್ರಶಾಂತ್, ರಾಜು ನಾಯ್ಕ, ಪ್ರವೀಣ್, ಎಂ.ಆರ್.ಸಂತೋಷ್, ಕೃಷ್ಣ ಮೂಲ್ಯ, ಆಶಾ, ರೋಹಿಣಿ, ಸಂದೀಪ್ ಹೆಗ್ಡೆ, ಡಿಸಿಸಿ ಬ್ಯಾಂಕ್ ಪ್ರತಿನಿಧಿ ಸಿರಾಜುದ್ದೀನ್ ಉಪಸ್ಥಿತರಿದ್ದರು. ಸಿಇಒ ಜಯಂತ ಪೂಜಾರಿ ವರದಿ ವಾಚಿಸಿದರು. ಸೌಜನ್ಯಾ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.
ಜಿಲ್ಲೆಯ ಎಲ್ಲ ಸಹಕಾರಿ ಸಂಸ್ಥೆಗಳು ಆತ್ಮನಿರ್ಭರವಾಗಿ ಕಾರ್ಯನಿರ್ವಹಿಸುತ್ತಿವೆ. ಸಹಕಾರ ರಂಗ ದೇಶಕ್ಕೆ ನೀಡುತ್ತಿರುವ ಆರ್ಥಿಕ ಚಟುವಟಿಕೆಗಳಿಂದ ಪ್ರೇರಿತರಾಗಿ ಸಹಕಾರ ಇಲಾಖೆಯೊಂದನ್ನು ತೆರದು ಅದನ್ನು ಇನ್ನಷ್ಟು ಬಲಿಷ್ಠಗೊಳಿಸಬೇಕು ಎಂಬ ಉದ್ದೇಶವನ್ನಿಟ್ಟುಕೊಳ್ಳಲಾಗಿದೆ. ಇಲಾಖೆಯು 25 ವಿಧದ ಆರ್ಥಿಕ ಚಟುವಟಿಕೆಗಳನ್ನು ನಿರ್ವಹಿಸಲು ಸಹಕಾರಿ ಕ್ಷೇತ್ರಕ್ಕೆ ಸೂಚನೆ ನೀಡಿದೆ. ಸಿದ್ಧವಿರುವ ಕಾಮನ್ ಅಕೌಂಟ್ ಸಾಫ್ಟ್‌ವೇರ್ ಮುಂದಿನ ದಿನಗಳಲ್ಲಿ ಅನುಷ್ಠಾನಗೊಳ್ಳಲಿದೆ. ಗುಜರಾತ್‌ನಲ್ಲಿ ಸಹಕಾರ ಕ್ಷೇತ್ರದ ಬಗ್ಗೆ ತರಬೇತಿ ನೀಡಲು ತ್ರಿಭುವನ್ ವಿ.ವಿ. ನಿರ್ಮಾಣವಾಗಲಿದ್ದು, 8 ಲಕ್ಷ ಮಂದಿಗೆ ತರಬೇತಿ ನೀಡಲಾಗುತ್ತದೆ. ಕ್ಯಾ.ಬ್ರಿಜೇಶ್ ಚೌಟ, ಸಂಸದ https://www.vijayavani.net/two-injured-in-suratkal-stabbing-four-arrested https://www.vijayavani.net/case-registered-against-rowdy-sheeter-who-threatened-firecracker-traders-for-hafta-tax-collection