

ಹುಬ್ಬಳ್ಳಿ: ಶಿರಹಟ್ಟಿಯ ಭಾವೈಕ್ಯತಾ ಸಂಸ್ಥಾನಮಠದ ಹಿರಿಯ ಶ್ರೀ ಫಕೀರ ಸಿದ್ಧರಾಮ ಸ್ವಾಮೀಜಿಯವರ 75ನೇ ಜನ್ಮದಿನೋತ್ಸವವನ್ನು ಅತ್ಯಂತ ವಿಶಿಷ್ಟ ಹಾಗೂ ವಿಭಿನ್ನವಾಗಿ ಆಚರಿಸಲು ಮತ್ತು ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಸ್ಮರಣೀಯಗೊಳಿಸಲು ಶ್ರೀಮಠದ ಭಕ್ತರು ತೀರ್ಮಾನಿಸಿದ್ದಾರೆ.
ಶ್ರೀ ಫಕೀರ ಸಿದ್ಧರಾಮ ಸ್ವಾಮೀಜಿ ಅವರ ಅಮೃತ ಮಹೋತ್ಸವ ನಿಮಿತ್ತ ನಗರದ ಪೃಥ್ವಿ ಪ್ಯಾರಡೈಸ್ ಹೋಟೆಲ್ನಲ್ಲಿ ಗುರುವಾರ ಏರ್ಪಡಿಸಿದ್ದ ಭಕ್ತರ ಪೂರ್ವಭಾವಿ ಸಭೆಯಲ್ಲಿ ಅನೇಕರು ಸಲಹೆ ಸೂಚನೆಗಳನ್ನು ನೀಡಿದರು.
ಭಾವೈಕ್ಯತಾ ರಥಯಾತ್ರೆ: ಪ್ರಾಸ್ತಾವಿಕ ಮಾತನಾಡಿದ ಜಗದ್ಗುರು ಶ್ರೀ ಫಕೀರ ದಿಂಗಾಲೇಶ್ವರ ಸ್ವಾಮೀಜಿ, ಶಿರಹಟ್ಟಿ ಮಠವು ವಿಶೇಷ ಪರಂಪರೆಯನ್ನು ಹೊಂದಿದ ವಿಭಿನ್ನ ಆಚರಣೆಗಳ ತಾಣವಾಗಿದೆ. ಈ ಮಠದ ಹಿರಿಯ ಸ್ವಾಮೀಜಿಗಳ ಜನ್ಮದಿನವನ್ನು ಐತಿಹಾಸಿಕಗೊಳಿಸಬೇಕು, ಕೈಗೊಂಡ ಕೆಲಸಗಳು ಶಾಶ್ವತವಾಗಿ ಉಳಿಯಬೇಕು ಎಂಬ ಆಲೋಚನೆ ಹೊಂದಿದ್ದೇವೆ. ಇವುಗಳಿಗೆ ಭಕ್ತರು ತಮ್ಮ ಸಲಹೆ ಸೂಚನೆಗಳನ್ನು ನೀಡಬೇಕು ಎಂದರು.
ಶ್ರೀಗಳು 75 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ 75 ಮೌಲಿಕ ಗ್ರಂಥಗಳನ್ನು ಹೊರತರಬೇಕು, 75 ದಿನಗಳವರೆಗೆ ನಿರಂತರ ಪ್ರವಚನ ಏರ್ಪಡಿಸಬೇಕು ಜತೆಗೆ ದಾಸೋಹವನ್ನು ನಡೆಸಬೇಕು ಎಂಬ ಉದ್ದೇಶ ಇದೆ. ಅಲ್ಲದೇ ಭಾವೈಕ್ಯತಾ ರಥಯಾತ್ರೆ ಹಮ್ಮಿಕೊಳ್ಳಬೇಕು. ಈ ರಥಕ್ಕೆ ಹುಬ್ಬಳ್ಳಿಯಿಂದಲೇ ಚಾಲನೆ ಸಿಗಬೇಕು. ಜ. 10ರಿಂದ 21 ದಿನಗಳವರೆಗೆ ರಥಯಾತ್ರೆ ಹುಬ್ಬಳ್ಳಿಯ ವಿವಿಧ ಕಡೆಗಳಲ್ಲಿ ಸಂಚರಿಸಬೇಕು. ಶಾಖಾ ಮಠಗಳಿರುವ ಎಂಟು ಜಿಲ್ಲೆಗಳಲ್ಲಿ ಉತ್ಸವ ನಡೆಯಬೇಕು ಎಂದು ಸ್ವಾಮೀಜಿ ಹೇಳಿದರು.
ಫೆ. 1ರಂದು ಶ್ರೀಗಳ ಜನ್ಮದಿನವಿದೆ. ಈ ಕಾರ್ಯಕ್ರಮಕ್ಕೆ ರಾಜ್ಯಪಾಲರನ್ನು ಹಾಗೂ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷ ಸುಧಾ ಮೂರ್ತಿ ಅವರನ್ನು ಅತಿಥಿಗಳಾಗಿ ಕರೆಯುವ ಉದ್ದೇಶವಿದೆ.
ತುಲಾಭಾರ: ಇನ್ನೊಂದು ವಿಶೇಷ ಎಂದರೆ ಆನೆ ಅಂಬಾರಿ ಆರೂಢರಾಗಿ ಶ್ರೀಗಳನ್ನು ನಾಣ್ಯಗಳಿಂದ ತುಲಾಭಾರ ಮಾಡಬೇಕು. ಇದನ್ನು ಹುಬ್ಬಳ್ಳಿಯಲ್ಲಿಯೇ ಮಾಡಬೇಕು ಎಂಬ ಇಚ್ಚೆ ಇದೆ. ಶಿರಹಟ್ಟಿಯಲ್ಲಿ ನಡೆಯುವ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಶ್ರೀಗಳ ಚಿನ್ನದ ತುಲಾಭಾರ ನೆರವೇರಿಸಬೇಕೆಂಬ ಆಶಯ ಇದೆ ಎಂದು ಶ್ರೀಗಳು ಕಾರ್ಯಕ್ರಮಗಳ ವಿವರ ಮಂಡಿಸಿದರು.
ಭಕ್ತರ ಸಹಮತ: ಜಗದ್ಗುರು ಶ್ರೀ ಕೀರ ದಿಂಗಾಲೇಶ್ವರ ಸ್ವಾಮೀಜಿ ಅವರು ಮಂಡಿಸಿದ ವಿಷಯಗಳಿಗೆ ಹುಬ್ಬಳ್ಳಿ ಭಕ್ತರು ಸಹಮತ ವ್ಯಕ್ತಪಡಿಸಿದರು. ಹುಬ್ಬಳ್ಳಿಯಲ್ಲಿ ಬೃಹತ್ ಧಾಮಿರ್ಕ ಕಾರ್ಯಕ್ರಮಗಳ ಮೂಲಕ ಭಕ್ತಿಯ ಹೊಳೆ ಹರಿಸಬೇಕು. ವೈವಿಧ್ಯಮಯ ಕಲಾತಂಡಗಳ ಮೆರವಣಿಗೆಯೊಂದಿಗೆ ರಥಯಾತ್ರೆ, ತುಲಾಭಾರ ಇತ್ಯಾದಿ ಕಾರ್ಯಕ್ರಮಗಳನ್ನು ಮಾಡುವುದು. ಇದಕ್ಕಾಗಿ ತಾವೆಲ್ಲ ದೇಣಿಗೆ ನೀಡಲು ಸಿದ್ಧ ಎಂದು ಅನೇಕರು ತಿಳಿಸಿದರು.
ಖ್ಯಾತ ಲೆಕ್ಕಪರಿಶೋಧಕ ಡಾ. ಎನ್.ಎ. ಚರಂತಿಮಠ ಮಾತನಾಡಿ, 75 ಸಾಧಕರನ್ನು ಗೌರವಿಸುವ ಕಾರ್ಯ ನಡೆಯಲಿ ಎಂದು ಸಲಹೆ ನೀಡಿದರು.
ರಾಜಶೇಖರ ಮೆಣಸಿನಕಾಯಿ ಮಾತನಾಡಿ, ಕಾರ್ಯಕ್ರಮದ ಯಶಸ್ಸಿಗೆ ವಿವಿಧ ಸಮಿತಿಗಳನ್ನು ರಚಿಸಬೇಕು, ರಾಜಕೀಯ ನಾಯಕರ ಪ್ರತ್ಯೇಕ ಸಭೆ ಕರೆದು ಅವರನ್ನು ತೊಡಗಿಸಿಕೊಳ್ಳಬೇಕು ಎಂದು ಕೋರಿದರು.
ಮುಖಂಡರಾದ ಶರಣಪ್ಪ ಕೊಟಗಿ, ಶಿವಕುಮಾರ ಹಿರೇಮಠ, ಡಾ. ವಿ.ಎಸ್.ವಿ. ಪ್ರಸಾದ, ಮಹೇಂದ್ರ ಸಿಂಘಿ, ರಜತ್ ಉಳ್ಳಾಗಡ್ಡಿಮಠ, ಡಾ. ಮಹೇಶ ನಾಲವಾಡ, ವೀರೇಶ ಸೊಬರದಮಠ, ರಾಜಣ್ಣ ಕೊರವಿ, ಇತರರು ಮಾತನಾಡಿದರು.
ಸಂತೋಷ ಹಿರೇಕೆರೂರು, ಶಿವನಗೌಡ ಪಾಟೀಲ, ಡಾ. ಲಿಂಗರಾಜ ಅಂಗಡಿ, ಬಂಗಾರೇಶ ಹಿರೇಮಠ ಇತರರು ಪಾಲ್ಗೊಂಡಿದ್ದರು.
ಧಾರವಾಡ ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಎರಡೆತ್ತಿನಮಠದ ಶ್ರೀ ಸಿದ್ದಲಿಂಗೇಶ್ವರ ಸ್ವಾಮೀಜಿ, ಬೊಮ್ಮನಹಳ್ಳಿಯ ಶಿವಯೋಗಿ ಸ್ವಾಮೀಜಿ, ರುದ್ರಾಮಠದ ಶ್ರೀ ಬಸವಲಿಂಗ ಸ್ವಾಮೀಜಿ, ರಾಯನಾಳದ ಅಭಿನವ ರೇವಣಸಿದ್ದೇಶ್ವರ ಸ್ವಾಮೀಜಿ, ನವನಗರದ ಶ್ರೀ ರಾಜಶೇಖರ ಶಿವಾಚಾರ್ಯ ಸ್ವಾಮೀಜಿ, ಬಾಗೇವಾಡಿಯ ಸ್ವಾಮೀಜಿ ಉಪಸ್ಥಿತರಿದ್ದರು. ಮಲ್ಲಿಕಾರ್ಜುನ ಸಾವಕಾರ, ಪ್ರಕಾಶ ಬೆಂಡಿಗೇರಿ ಕಾರ್ಯಕ್ರಮ ನಿರ್ವಹಣೆ ಮಾಡಿದರು.