

ಹುಬ್ಬಳ್ಳಿ: ಶಿರಹಟ್ಟಿಯ ಭಾವೈಕ್ಯತಾ ಶ್ರದ್ಧಾಕೇಂದ್ರ ಜಗದ್ಗುರು ಶ್ರೀ ಫಕೀರೇಶ್ವರ ಸಂಸ್ಥಾನ ಪೀಠದ 13ನೇ ಪೀಠಾಧಿಪತಿ ಶ್ರೀ ಫಕೀರಸಿದ್ಧರಾಮ ಸ್ವಾಮೀಜಿಗಳ ಅಮೃತ ಮಹೋತ್ಸವ ಅಂಗವಾಗಿ ಜ. 10ರಿಂದ ಹುಬ್ಬಳ್ಳಿಯಲ್ಲಿ ಭಾವೈಕ್ಯ ರಥಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀಫಕೀರ ದಿಂಗಾಲೇಶ್ವರ ಸ್ವಾಮೀಜಿ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀಗಳ 75ನೇ ಜನ್ಮದಿನೋತ್ಸವವನ್ನು ಸ್ಮರಣೀಯಗೊಳಿಸುವ ಸಲುವಾಗಿ ಈಗಾಗಲೇ ಭಕ್ತರು ನಿರ್ಧರಿಸಿರುವಂತೆ ಶಿರಹಟ್ಟಿಯಲ್ಲಿ 75 ಗ್ರಂಥಗಳ ಲೋಕಾರ್ಪಣೆ, 75 ಸಾಮೂಹಿಕ ವಿವಾಹ, 75ದಿನಗಳವರೆಗೆ ನಿರಂತರ ಪ್ರವಚನ, ಸುವರ್ಣ ತುಲಾಭಾರ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.
ಈ ಎಲ್ಲ ಕಾರ್ಯಕ್ರಮಗಳಿಗೆ ಮುಂಚಿತವಾಗಿ ಶ್ರೀಗಳು ಶಿಕ್ಷಣ ಪಡೆದ ಹುಬ್ಬಳ್ಳಿಯಿಂದಲೇ ಭಾವ್ಯಕ್ಯತಾ ರಥಯಾತ್ರೆ ಆರಂಭಿಸಲು ನಿರ್ಧರಿಸಲಾಗಿದೆ. ಜ. 10ರಂದು ಬೆಳಗ್ಗೆ ಬಿಡನಾಳದಲ್ಲಿ ರಥಯಾತ್ರೆಗೆ ಮೂರುಸಾವಿರ ಮಠದ ಜಗದ್ಗುರು ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಚಾಲನೆ ನೀಡುವರು.
ಸಮಾಜದಲ್ಲಿ ಸಾಮರಸ್ಯ ಮೂಡಿಸುವುದು, ಸಹೋದರತ್ವ ಬೆಳೆಸುವ ದಿಸೆಯಲ್ಲಿ ಭಾವೈಕ್ಯ ಕೇಂದ್ರವು ಶ್ರಮಿಸುತ್ತಿದೆ. ಇದನ್ನು ಎಲ್ಲೆಡೆ ಪಸರಿಸುವ ಉದ್ದೇಶದಿಂದ ಯಾತ್ರೆ ಹಮ್ಮಿಕೊಳ್ಳಲಾಗಿದೆ. 20ದಿನಗಳವರೆಗೆ ನಗರದ ವಿವಿಧ ಕಡೆಗಳಲ್ಲಿ ಯಾತ್ರೆ ಸಂಚರಿಸಲಿದೆ ಎಂದರು.
ತುಲಾಭಾರ: ಫೆ. 1ರಂದು ಹುಬ್ಬಳ್ಳಿಯಲ್ಲಿ ವೈವಿಧ್ಯಮಯ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಅಂದು ಬೆಳಗ್ಗೆ ಮೂರುಸಾವಿರ ಮಠದಿಂದ ಚನ್ನಮ್ಮ ವೃತ್ತದ ಮಾರ್ಗವಾಗಿ ನೆಹರು ಮೈದಾನದವರೆಗೆ ಆನೆಯ ಅಂಬಾರಿ, ಜಗದ್ಗುರು ಕೀರೇಶ್ವರರ ಬೆಳ್ಳಿ ಮೂರ್ತಿ ಉತ್ಸವದ ಮೆರವಣಿಗೆ ನಡೆಯಲಿದೆ. ಚನ್ನಮ್ಮ ವೃತ್ತದಲ್ಲಿ ಪುಷ್ಪವೃಷ್ಟಿ ಹಾಗೂ ನೆಹರು ಮೈದಾನದಲ್ಲಿ ಸಂಜೆ 5ಕ್ಕೆ ಆನೆ ಅಂಬಾರಿ ಆರೂಢರಾಗಿ ಸ್ವಾಮೀಜಿಗಳ ತುಲಾಭಾರ ಕಾರ್ಯಕ್ರಮ ನಾಣ್ಯಗಳಿಂದ ನಡೆಯಲಿದೆ. ಇದೇ ಮೊದಲ ಇಂತಹ ವಿಶೇಷ ಕಾರ್ಯಕ್ರಮವಾಗುತ್ತಿದ್ದು, ದಾಖಲೆಯಾಗುವ ನಿರೀಕ್ಷೆ ಇದೆ ಎಂದರು.
ಇದಕ್ಕಾಗಿ 44 ಅಡಿ ಉದ್ದ, 30 ಅಡಿ ಎತ್ತರ, 20 ಅಡಿ ಅಗಲದ ಬೃಹತ್ ತಕ್ಕಡಿಯನ್ನು ಸಿದ್ಧಪಡಿಸುವ ಜವಾಬ್ದಾರಿಯನ್ನು ನಗರದ ಎಸ್ಆರ್ವಿ ಕಂಪನಿಯವರಿಗೆ ನೀಡಲಾಗಿದೆ. ಸುಮಾರು 5555 ಕೆಜಿ ನಾಣ್ಯಗಳನ್ನು ದಾನಿಗಳಿಂದ ಸಂಗ್ರಹ ಮಾಡಲಾಗುತ್ತಿದೆ ಎಂದು ಶ್ರೀಗಳು ಹೇಳಿದರು.
ಇದೇ ರೀತಿ ಶಿರಹಟ್ಟಿಯಲ್ಲಿ ನಂತರದ ದಿನಗಳಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಅಲ್ಲಿ ಶ್ರೀಗಳ ಬಂಗಾರದ ತುಲಾಭಾರ ನಡೆಯಲಿದೆ. ಭಕ್ತರಿಂದ ಸಂಗ್ರಹಿಸಿದ ದೇಣಿಗೆಯನ್ನು ಸ್ಥಾಯಿ ನಿಧಿಯಾಗಿ ಇಟ್ಟು ಬಡ ಮಕ್ಕಳ ಶಿಕ್ಷಣಕ್ಕಾಗಿ ಮೀಸಲಿಡಾಗುತ್ತಿದೆ.
ಬರಗಾಲದ ಈ ಸಂದರ್ಭದಲ್ಲಿ ಯಾರೊಬ್ಬರಿಗೂ ತೊಂದರೆಯಾಗದ ರೀತಿಯಲ್ಲಿ ಆಸಕ್ತ ಭಕ್ತರಿಂದ ಮಾತ್ರ ದೇಣಿಗೆ ಸಂಗ್ರಹಿಸಿ ಜನೋಪಯೋಗಿ ಕಾರ್ಯಕ್ರಮ ಮಾಡಲಾಗುತ್ತಿದೆ. ಇದಕ್ಕಾಗಿ ನಿಮಿರ್ಸಿದ ತಕ್ಕಡಿ ಸ್ಮಾರಕವಾಗಿ ಮಠದಲ್ಲಿ ಉಳಿಯಲಿದೆ ಎಂದು ಮಾಹಿತಿ ನೀಡಿದರು.
ಮಲ್ಲಿಕಾರ್ಜುನ ಸಾವಕಾರ, ಮಲ್ಲಿಕಾರ್ಜುನ ಶಿರಗುಪ್ಪಿ, ಶಿವನಗೌಡ ಪಾಟೀಲ, ಚಂದ್ರಶೇಖರ ಗೋಕಾಕ, ಇಂದುಧರ ಮಠದ, ಪ್ರಕಾಶ ಹಳ್ಯಾಳ ಗೋಷ್ಠಿಯಲ್ಲಿದ್ದರು.