ತಡವಾಗಿ ಬೆಳಕಿಗೆ ಬಂದ ನಕಲಿ ಮತದಾನ

Voting
Published on

ಪಶ್ಚಿಮ, ಪದವೀಧರ, ಕ್ಷೇತ್ರ, ಮತ, ಚಲಾವಣೆ, ದೂರು, ದಾಖಲು, ನಕಲಿ, Western, Graduate, Constituency, Vote, circulation, complaint, registration, Fake,

ರಾಣೆಬೆನ್ನೂರ: ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಅ. 28ರಂದು ನಡೆದ ಚುನಾವಣೆಯಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳು ನಕಲಿ ಮತದಾನ ಮಾಡಿರುವುದು ತಡವಾಗಿ ಬೆಳಕಿಗೆ ಬಂದಿದೆ. ಈ ಕುರಿತು ತಹಸೀಲ್ದಾರ್ ಬಸನಗೌಡ ಕೋಟೂರು ಅವರು ತಾಲೂಕಿನ ಕುಮಾರಪಟ್ಟಣ ಪೊಲೀಸ್ ಠಾಣೆಯಲ್ಲಿ ಬುಧವಾರ ದೂರು ದಾಖಲಿಸಿದ್ದಾರೆ.

ತಾಲೂಕಿನ ಕೋಡಿಯಾಲ ಹೊಸಪೇಟೆ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ 105ನೇ ಮತಗಟ್ಟೆಯಲ್ಲಿ ಘಟನೆ ನಡೆದಿದೆ.

ಈ ಮತಗಟ್ಟೆಗೆ ಸಂಬಂಧಿಸಿದ ಮತದಾರ ಪಟ್ಟಿಯಲ್ಲಿ ನೋಂದಾಯಿತರಾದ ಶೀಲಾ ಕೆ.ಎಸ್. ಹಾಗೂ ವೀರಪ್ಪ ಹಾಲಪ್ಪ ನಂದಿಗಾವಿ ಮತದಾನ ಮಾಡಲು ಬಂದಿದ್ದರು. ಆದರೆ, ಇವರು ಬರುವ ಮುನ್ನವೇ ಇವರ ಹೆಸರಿನಲ್ಲಿ ಬೇರೆ ಇಬ್ಬರು ವ್ಯಕ್ತಿಗಳು ಮತದಾನ ಮಾಡಿ ಹೋಗಿದ್ದರು. ಈ ಬಗ್ಗೆ ಚುನಾವಣೆ ಸಿಬ್ಬಂದಿಯು ಮತದಾರರ ಪಟ್ಟಿಯಲ್ಲಿ ಗುರುತು ಸಹ ಮಾಡಿಕೊಂಡಿದ್ದರು. ಆಗ ಶೀಲಾ ಹಾಗೂ ವೀರಪ್ಪ, ಚುನಾವಣೆ ಸಿಬ್ಬಂದಿ ವಿರುದ್ಧ ಹರಿಹಾಯ್ದು ‘ನಾವು ನಿಜವಾದ ಮತದಾರರು. ಬೇರೆಯವರಿಗೆ ಹೇಗೆ ಅವಕಾಶ ನೀಡಿದ್ದೀರಿ? ನಮಗೂ ಮತದಾನಕ್ಕೆ ಅವಕಾಶ ಮಾಡಿಕೊಡಬೇಕು’ ಎಂದು ಪಟ್ಟುಹಿಡಿದು ಮತ ಚಲಾಯಿಸಿದ್ದರು.

ಮತದಾನದ ದಿನ ಮುಗಿದ ಬಳಿಕ ನಕಲಿ ಮತದಾನ ಮಾಡಿರುವ ಕುರಿತು ಗ್ರಾಮದ ಕೆಲವರು ಜಿಲ್ಲಾಧಿಕಾರಿ ಗಮನಕ್ಕೆ ತಂದಿದ್ದರು. ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ, ಈ ಕುರಿತು ಪರಿಶೀಲಿಸಿ ನಕಲಿ ಮತ ಚಲಾವಣೆಯಾದ ಬಗ್ಗೆ ಹಾಗೂ ಮತದಾನ ಮಾಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ತಹಸೀಲ್ದಾರ್ ಬಸನಗೌಡ ಕೋಟೂರು ಅವರಿಗೆ ಆದೇಶಿಸಿದ್ದರು. ಈ ಹಿನ್ನೆಲೆಯಲ್ಲಿ ತಹಸೀಲ್ದಾರ್ ಬಸನಗೌಡ ಅವರು ಕುಮಾರಪಟ್ಟಣ ಪೊಲೀಸರಿಗೆ ದೂರು ನೀಡಿದ್ದಾರೆ.

ನಿದ್ದೆಗೆ ಜಾರಿದ್ದರೆ ಅಧಿಕಾರಿಗಳು?

ಚುನಾವಣೆ ಮತಗಟ್ಟೆಯಲ್ಲಿ ಪಿಆರ್​ಒ, ಎಪಿಆರ್​ಒ, ಪಿಒ ಸೇರಿ ನಾಲ್ವರು ಸಿಬ್ಬಂದಿ ಕಾರ್ಯನಿರ್ವಹಿಸುತ್ತಾರೆ. ಏಜೆಂಟರೂ ಇರುತ್ತಾರೆ. ಪ್ರತಿಯೊಬ್ಬ ಮತದಾರರ ಗುರುತಿನ ಚೀಟಿ ಹಾಗೂ ಅವರ ಭಾವಚಿತ್ರ ಪರಿಶೀಲಿಸಿಯೇ ಮತದಾನಕ್ಕೆ ಅವಕಾಶ ನೀಡಲಾಗುತ್ತದೆ. ಹೀಗಿದ್ದರೂ ನಕಲಿ ಮತದಾನ ಹೇಗಾಯಿತು ಎಂಬುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಆದ್ದರಿಂದ ನಕಲಿ ಮತದಾನ ಮಾಡಿದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಪ್ರಕರಣದಲ್ಲಿ ನಿರ್ಲಕ್ಷ್ಯ ತೋರಿದ ಚುನಾವಣೆ ಸಿಬ್ಬಂದಿ ಮೇಲೆಯೂ ದೂರು ದಾಖಲಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಕೋಡಿಯಾಲ ಹೊಸಪೇಟೆ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ 105ನೇ ಮತಗಟ್ಟೆಯಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳು ನಕಲಿ ಮತದಾನ ಮಾಡಿದ ಬಗ್ಗೆ ತಹಸೀಲ್ದಾರ್ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಅಂದಿನ ವಿಡಿಯೋ ಚಿತ್ರೀಕರಣ ಸಂಪೂರ್ಣ ಪರಿಶೀಲಿಸಿದ ಬಳಿಕ ನಕಲಿ ಮತದಾರರು ಪತ್ತೆಯಾಗಲಿದ್ದಾರೆ. ಇದರಲ್ಲಿ ಚುನಾವಣೆ ಸಿಬ್ಬಂದಿ ನಿರ್ಲಕ್ಷ್ಯೂ ಕಂಡುಬರುತ್ತದೆ. ಆರೋಪಿಗಳು ಸಿಕ್ಕ ನಂತರ ತಪ್ಪಿತಸ್ಥರು ಯಾರು ಎಂಬುದು ಸ್ಪಷ್ಟವಾಗಲಿದೆ. | ಟಿ.ವಿ. ಸುರೇಶ, ಡಿವೈಎಸ್ಪಿ ರಾಣೆಬೆನ್ನೂರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net