ರೈತರ ಕಂಗೆಡಿಸಿದ ನಕಲಿ ಬಿತ್ತನೆ ಬೀಜ

Untitled-1
Published on

ಎನ್​.ಮುನಿವೆಂಕಟೇಗೌಡ, ಕೋಲಾರ: ಏಷ್ಯಾದಲ್ಲಿಯೇ ಅತೀ ಹೆಚ್ಚು ಟೊಮ್ಯಾಟೊ ಬೆಳೆಯುವ ಜಿಲ್ಲೆ ಎಂದು ಹೆಗ್ಗಳಿಕೆ ಪಡೆದಿರುವ ಕೋಲಾರ ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಟೊಮ್ಯಾಟೊ ಬೆಳೆ ಕುಸಿತ ಕಾಣುತ್ತಿದ್ದು, ಅಂಗಡಿಗಳಲ್ಲಿ ಗುಣಮಟ್ಟದ ಬೀಜ ಹಾಗೂ ನರ್ಸರಿಗಳಲ್ಲಿ ಉತ್ತಮ ಸಸಿ ನೀಡದ ಕಾರಣ ಇಳುವರಿ ಕುಂಠಿತವಾಗುತ್ತಿರುವುದು ರೈತರು ಆತಂಕಕ್ಕೀಡು ಮಾಡಿದೆ.

ಜಿಲ್ಲೆಯಲ್ಲಿ ಸುಮಾರು 8 ಸಾವಿರ ಹೆಕ್ಟೇರ್​ನಲ್ಲಿ ಟೊಮ್ಯಾಟೊ ಬೆಳೆಯಲಾಗುತ್ತದೆ. ಕಳೆದ ಎರಡು ವರ್ಷಗಳಿಂದ ಇಳುವರಿ ತೀವ್ರ ಕುಸಿತಗೊಂಡಿದೆ. ಹೆಚ್ಚಿನ ಪ್ರಮಾಣದಲ್ಲಿ ಸಾಹು ತಳಿಯ ಟೊಮ್ಯಾಟೊ ಬೆಳೆಯಲಾಗುತ್ತಿತ್ತು. ಆದರೆ ಇದೀಗ ಆ ತಳಿಯ ಬೆಳೆಗೆ ಬಿಂಗಿ ಸೇರಿ ವಿವಿಧ ರೋಗಗಳು ಹಬ್ಬುತ್ತಿದ್ದು, ಅಂಗಡಿ ಮಾಲೀಕರು ಗುಣಮಟ್ಟದ ಬೀಜ, ನರ್ಸರಿಯಲ್ಲಿ ನಾರು ಕೊಡುತ್ತಿಲ್ಲ ಎಂಬುದು ರೈತರ ವಾದವಾಗಿದೆ. ಬೇಡಿಕೆ ಹೆಚ್ಚಿಸಿ ಬೆಲೆ ಹೆಚ್ಚಿಸುವ ತಂತ್ರ: ಮಾರ್ಚ್​ ಮೊದಲ ವಾರ ಟೊಮ್ಯಾಟೊ ಬಿತ್ತನೆ ಪ್ರಾರಂಭವಾಗುತ್ತದೆ. ಜಿಲ್ಲೆಯ ಬಹುತೇಕ ರೈತರು ಟೊಮ್ಯಾಟೊ ಸಸಿ ನಾಟಿ ಮಾಡಲು ಮುಂದಾಗುತ್ತಾರೆ. ಆಗ ನರ್ಸರಿ ಮಾಲೀಕರು ತಮ್ಮ ನರ್ಸರಿಯಲ್ಲಿ ಸಸಿ ಲಭ್ಯವಿದ್ದರೂ ಬೇರೆಯವರು ನೋಂದಣಿ ಮಾಡಿದ್ದಾರೆ ಎಂದು ಬೇಡಿಕೆ ಹೆಚ್ಚಿಸಿ ಸಸಿಗಳ ಬೆಲೆ ಹೆಚ್ಚಳ ಮಾಡುತ್ತಾರೆ. ಆಗ ರೈತರಿಗೆ ನಾರು ತೀರಾ ಅವಶ್ಯವಿರುವ ಕಾರಣ ದುಪ್ಪಟ್ಟು ಹಣ ನೀಡಿ ಸಸಿಗಳು ಖರೀದಿಸುತ್ತಾರೆ. ಸಾಮಾನ್ಯ ದಿನಗಳಲ್ಲಿ ಒಂದು ಸಸಿಗೆ 1.5 ರೂ.ನಿಂದ 2 ರೂ. ತನಕ ಮಾರಾಟವಾದರೆ, ಸುಗ್ಗಿ ವೇಳೆ 2.50 ಪೈಸೆ ಯಿಂದ 3 ರೂ. ತನಕ ಮಾರಾಟ ಮಾಡುತ್ತಾರೆ. ಬಹುತೇಕ ರೈತರು ಬೀಜ ಖರೀದಿ ಮಾಡುವುದಿಲ್ಲ. ನರ್ಸರಿಗಳ ಮೂಲಕವೇ ನಾರು ಖರೀದಿ ಮಾಡಿ ನಾಟಿ ಮಾಡುತ್ತಾರೆ ಎನ್ನಲಾಗಿದೆ.

ಸಂಘಗಳ ಹೆಸರಿನಲ್ಲಿ ವಂಚನೆ: ಬಹುತೇಕ ರೈತ ಸಂಘ ಟನೆ ಕಟ್ಟಿಕೊಂಡಿರುವ ನಾಯಕರು ನರ್ಸರಿ ಗಳನ್ನು ಪ್ರಾರಂಭಿಸಿದ್ದು, ಕಳಪೆ ಬಿತ್ತನೆ ಬೀಜಗಳಿಂದ ಸಸಿ ಮಾಡಿ ಮಾರಾಟ ಮಾಡುತ್ತಾರೆಂಬ ಆರೋಪ ಕೇಳಿ ಬಂದಿದೆ. ನರ್ಸರಿ ಮಾಲೀಕರು ಬಿತ್ತನೆ ಬೀಜ ಖರೀದಿಸುವಾಗ ಮತ್ತು ರೈತರಿಗೆ ಸಸಿ ನೀಡುವಾಗಲೂ ಬಿಲ್​ ನೀಡಬೇಕು. ಆದರೆ ರೈತ ಸಂಘಟನೆಯ ಹೆಸರೇಳಿಕೊಂಡು ನಿಯಮ ಗಾಳಿಗೆ ತೂರಿ ನರ್ಸರಿಗಳನ್ನು ನಡೆಸುತ್ತಿದ್ದಾರೆ. ನಕಲಿ ಸಸಿಗಳಿಂದ ಬೆಳೆ ಆಗದಿದ್ದಲ್ಲಿ ರೈತರು ಯಾರನ್ನೂ ಪ್ರಶ್ನಿಸುವಂತಿಲ್ಲ. ಪ್ರಶ್ನೆ ಮಾಡಿದರೆ ನೀವು ನಮ್ಮಲ್ಲಿ ಸಸಿ ಖರೀದಿಸಿಲ್ಲ ಎಂದು ದರ್ಪ ತೋರುತ್ತಾರೆ. ಆಗ ರೈತರು ವಿಧಿಯಿಲ್ಲದೆ ನಷ್ಟ ಅನುಭವಿಸಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಅಧಿಕಾರಿಗಳಿಗೆ ಈ ಬಗ್ಗೆ ದೂರು ನೀಡಿದರೆ ಬಿಲ್​ ಕೇಳುತ್ತಾರೆ. ಬಿಲ್​ ಇಲ್ಲ ಇಂಥ ನರ್ಸರಿಯಿಂದ ನಾರು ತರಲಾಗಿದೆ ಎಂದು ಹೇಳಿದರೆ ಅವು ಸಂಘಟನೆಗಳ ನರ್ಸರಿಗಳಾದ ಕಾರಣ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ರೈತರು ಆರೋಪಿಸುತ್ತಿದ್ದಾರೆ.

ಅಧಿಕಾರಿಗಳು ಎಚ್ಚೆತ್ತುಕೊಳ್ಳಲಿ; ನೂರಾರು ಬಿತ್ತನೆ ಬೀಜಗಳ ಕಂಪನಿಗಳು ಮಾರಾಟ ಮಾಡುವ ಬೀಜಗಳಲ್ಲಿ ಯಾವುದೇ ಗುಣಮಟ್ಟ ಇರುವುದಿಲ್ಲ. ತೋಟಗಾರಿಕೆ ಇಲಾಖೆ ಅಧಿಕಾರಿಗಳು ನರ್ಸರಿಗಳಿಗೆ ಭೇಟಿ ನೀಡಿ, ಅಲ್ಲಿ ಬಿತ್ತನೆ ಮಾಡುವ ಬೀಜಗಳನ್ನು ಪರಿಶೀಲನೆ ನಡೆಸಬೇಕು. ಯಾವ ಕಂಪನಿ ಬೀಜಗಳಿಂದ ಬೆಳೆಯಾಗುವುದಿಲ್ಲವೋ ಆ ಕಂಪನಿ ವಿರುದ್ಧ ಕ್ರಮಕ್ಕೆ ಮುಂದಾಗಬೇಕು. ಜಿಲ್ಲೆಯಲ್ಲಿ 3,800 ಕಂಪನಿಗಳ ಬೀಜಗಳು ಮಾರಾಟವಾಗುತ್ತಿದ್ದು, ಜಿಲ್ಲೆಯಲ್ಲಿ 800 ಅಂಗಡಿಗಳು ಬೀಜ ಮತ್ತು ರಸಗೊಬ್ಬರ ಮತ್ತು ಔಷಧ ಮಾರಾಟ ಮಾಡುತ್ತಿದ್ದಾರೆ. ರೈತರಿಗೆ ಕಾಲ ಕಾಲಕ್ಕೆ ಮಾರ್ಗದರ್ಶನ ನೀಡಲು ವಿವಿಧ ಖಾಸಗಿ ಕಂಪನಿಗಳಿಂದ 5,800 ಸ್ಥಳಿಯವಾಗಿ ಸೂಪರ್​ವೈಸರ್​ಗಳು ಇದ್ದು, ಅವರು ಆಯಾ ಕಂಪನಿಗಳ ಬೀಜ ಮತ್ತು ರಸಗೊಬ್ಬರ ಔಷಧ ಖರೀದಿ ಮಾಡಲು ಒತ್ತಾಯ ಮಾಡುತ್ತಾರೆ. ಜಿಲ್ಲೆಯಲ್ಲಿ 200 ನರ್ಸರಿಗಳು ತಲೆ ಎತ್ತಿದ್ದು, ರೈತರಿಗೆ ಟಮೆಟೋ ನಾರು ಅಲ್ಲದೆ ಕ್ಯಾಪ್ಸಿಕಂ ಸೇರಿದಂತೆ ವಿವಿಧ ತರಕಾರಿ ಬೆಳೆಗಳ ನಾರನ್ನೂ ಸಹ ನೀಡುತ್ತಾರೆ.

ಈಗಾಗಲೇ ತೋಟಗಾರಿಕೆ ಇಲಾಖೆಯಿಂದ ವಿಜ್ಞಾನಿಗಳು ಒಳಗೊಂಡ ತಂಡ ರಚನೆ ಮಾಡಲಾಗಿದೆ. ಬಿತ್ತನೆ ಬೀಜ ಸೇರಿ ಔಷಧ ಮತ್ತು ರಸಗೊಬ್ಬರಗಳ ಗುಣಮಟ್ಟದ ವೀಕ್ಷಣೆ ಮಾಡಲಾಗುತ್ತದೆ. ರೈತರು ಬೀಜ ಖರೀದಿ ಮಾಡುವಾಗ ಮತ್ತು ನರ್ಸರಿಯಿಂದ ಸಸಿ ಖರೀದಿ ಮಾಡುವಾಗ ಬಿಲ್​ ಪಡೆಯಬೇಕು. ಕಳಪೆ ನಾರು ವಿತರಣೆ ಮಾಡಿದರೆ ಇಲಾಖೆಗೆ ದೂರು ನೀಡಬೇಕು. ನರ್ಸರಿ ಮಾಲೀಕರು ಯಾರೇ ಭಲಾಡ್ಯರಾದರೂ ಕ್ರಮ ಕೈಗೊಳ್ಳುತ್ತೇವೆ. ಇದುವರೆವಿಗೂ ಆ ರೀತಿ ಯಾವುದೇ ದೂರು ಬಂದಿಲ್ಲ.

 -ಕುಮಾರಸ್ವಾಮಿ, ಉಪನಿರ್ದೇಶಕ, ತೋಟಗಾರಿಕೆ ಇಲಾಖೆ

ಜಿಲ್ಲೆಯಲ್ಲಿ ನಕಲಿ ಬಿತ್ತನೆ ಬೀಜಗಳ ಹಾವಳಿ ಹೆಚ್ಚಾಗಿದೆ. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ತಂಡ ರಚನೆ ಮಾಡಿ, ಗುಣಮಟ್ಟದ ಬೀಜ ನೀಡುವಂತೆ ಹಾಗೂ ಅಂಗಡಿಗಳಲ್ಲಿ ಗುಣಮಟ್ಟದ ಬೀಜ ಮಾರಾಟ ಮಾಡುವಂತೆ ಸೂಚನೆ ನೀಡಬೇಕು, ಆಗಾಗ ಪರಿಶೀಲನೆ ಮಾಡಬೇಕು. ನರ್ಸರಿ ಮಾಲೀಕರು ತೋಟಗಾರಿಕೆ ಇಲಾಖೆ ನಿಯಮ ಪಾಲನೆ ಮಾಡಬೇಕು. ಸಂಘಟನೆಗಳ ಹೆಸರಿನಲ್ಲಿ ದರ್ಪ ನಡೆಸುವವರು ನರ್ಸರಿ ಮಾಲೀಕರಾಗಿದ್ದಾರೆ. ಅವರು ಎಚ್ಚೆತ್ತುಕೊಂಡು ರೈತರಿಗಾಗುವ ನಷ್ಟ ತಪ್ಪಿಸಲು ಸಹಕಾರ ಮಾಡಬೇಕು.

-ನಾರಾಯಣಗೌಡ ರೈತ ಸಂಘದ ಉಪಾಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net