ಕವಿವಿ ನಕಲಿ ನೇಮಕಾತಿ ಪಟ್ಟಿ ವೈರಲ್: ಕವಿವಿ ಹೆಸರು, ಲಾಂಛನ ದುರ್ಬಳಕೆ

Karnataka univarcity
Published on

ಮಂಜುನಾಥ ಅಂಗಡಿ ಧಾರವಾಡ

ನಗರದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ನೇಮಕಾತಿ ಸಂಬಂಧ ಕೆಲವರು ಕವಿವಿ ಹೆಸರು, ಲಾಂಛನ ದುರ್ಬಳಕೆ ಮಾಡಿಕೊಂಡು ನಕಲಿ ತಾತ್ಕಾಲಿಕ ನೇಮಕಾತಿ ಪಟ್ಟಿ ವೈರಲ್ ಮಾಡಿದ್ದಾರೆ.

ವಿಶ್ವವಿದ್ಯಾಲಯವು 2023ರ ಅಕ್ಟೋಬರ್​ನಲ್ಲಿ ಕರಡು ವಾಚಕ (1), ಬಡಿಗ/ ಪೇಂಟರ್ (1) ಮತ್ತು ಇಲೆಕ್ಟ್ರಿಷಿಯನ್ (1) ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಿತ್ತು. ಅರ್ಜಿಗಳ ಪರಿಶೀಲನೆ ಕಾರ್ಯ ಪ್ರಗತಿಯಲ್ಲಿದ್ದು, ಕವಿವಿ ಇನ್ನೂ ನೇಮಕಾತಿಯನ್ನು ಅಂತಿಮಗೊಳಿಸಿಲ್ಲ. ವಿಶ್ವವಿದ್ಯಾಲಯದ ಅಧಿಕೃತ ವೆಬ್​ಸೈಟ್​ನಲ್ಲೂ ಪ್ರಕಟಿಸಿಲ್ಲ.

ಈ ಮಧ್ಯೆ ಕೆಲ ದುಷ್ಕರ್ವಿುಗಳು ವಿಶ್ವವಿದ್ಯಾಲಯದ ಹೆಸರು ಮತ್ತು ಲಾಂಛನ ದುರ್ಬಳಕೆ ಮಾಡಿಕೊಂಡು ನಕಲಿ ತಾತ್ಕಾಲಿಕ ಪಟ್ಟಿಯನ್ನು ಪ್ರಚಾರ ಪಡಿಸುತ್ತಿದ್ದಾರೆ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಮೊಬೈಲ್​ಗೆ ಹರಿಬಿಟ್ಟಿದ್ದಾರೆ. 28 ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ಎಂದು ತಪ್ಪು ಮಾಹಿತಿ ನೀಡುತ್ತಿದ್ದಾರೆ. ಇದರ ಹಿಂದೆ ಅರ್ಜಿದಾರರನ್ನು ಮೋಸ ಮಾಡುವ ಷಡ್ಯಂತ್ರ ಇದೆ. ಈ ಬಗ್ಗೆ ಎಚ್ಚರಿಕೆ ವಹಿಸಬೇಕು. ಯಾರೊಂದಿಗೂ ಹಣಕಾಸಿನ ವ್ಯವಹಾರ ಮಾಡಬಾರದು ಎಂದು ವಿಶ್ವವಿದ್ಯಾಲಯದ ಕುಲಸಚಿವರ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.

ಅರ್ಜಿ ಸಲ್ಲಿಸಿದವರೇ ಟಾರ್ಗೆಟ್ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸುಮಾರು 10 ವರ್ಷಗಳಿಂದ ನೇಮಕಾತಿ ನಡೆದಿಲ್ಲ. 841 ಬೋಧಕೇತರ ಮತ್ತು 408 ಬೋಧಕ ಹುದ್ದೆಗಳು ಖಾಲಿ ಇವೆ. ಈ ಮಧ್ಯೆ ಕೇವಲ 3 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಕರಡು ವಾಚಕ, ಬಡಿಗ/ ಪೇಂಟರ್ ಮತ್ತು ಇಲೆಕ್ಟ್ರಿಷಿಯನ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದವರಿಗೆ ದುಷ್ಕರ್ವಿುಗಳು ಗಾಳ ಹಾಕಲು ಯತ್ನಿಸಿದ್ದಾರೆ.

ಸಿಬ್ಬಂದಿ ಕೈವಾಡ ಶಂಕೆ

ಸದ್ಯ ವೈರಲ್ ಆಗಿರುವ ತಾತ್ಕಾಲಿಕ ನಕಲಿ ಆಯ್ಕೆ ಪಟ್ಟಿಯಲ್ಲಿ ಕೆಲವರು ನೇಮಕವಾಗಿದ್ದಾರೆ ಎಂದು ನಮೂದಿಸಲಾಗಿದೆ. ಕೇವಲ 3 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದ್ದರೂ 28 ಹುದ್ದೆಗಳು ಮತ್ತು ಅವುಗಳ ಮೀಸಲಾತಿಯನ್ನು ನಮೂದಿಸಲಾಗಿದೆ. ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ನೇಮಕವಾದವರು ಎಂದು ಹೆಸರು, ವಿಳಾಸವನ್ನೂ ವಿವರಿಸಲಾಗಿದೆ. ಅರ್ಜಿ ಸಲ್ಲಿಸಿದವರ ವಿವರ ನೀಡುವಲ್ಲಿ ಕವಿವಿ ಸಿಬ್ಬಂದಿಯ ಕೈವಾಡ ಇದೆ ಎಂದು ಶಂಕಿಸಲಾಗಿದೆ.

ಬಾಕ್ಸ್ ದೂರು ದಾಖಲಿಸುವರೇ...?

ಈ ನಕಲಿ ಆಯ್ಕೆ ಪಟ್ಟಿ ವೈರಲ್ ಮಾಡಿರುವ ಕುರಿತು ವಿಶ್ವವಿದ್ಯಾಲಯ ಆಡಳಿತ ಮಂಡಳಿ ಈವರೆಗೂ ಪೊಲೀಸ್ ದೂರು ಸಲ್ಲಿಸುವ ಗೋಜಿಗೆ ಹೋಗಿಲ್ಲ. ದುಷ್ಕರ್ವಿುಗಳು ವಿಶ್ವವಿದ್ಯಾಲಯದ ಹುದ್ದೆಗಳ ಆಕಾಂಕ್ಷಿಗಳಿಂದ ಹಣ ಕಿತ್ತು ಮೋಸ ಮಾಡುವ ಮುನ್ನ ಆಡಳಿತಾಧಿಕಾರಿಗಳು ಎಚ್ಚೆತ್ತುಕೊಳ್ಳುವ ಅಗತ್ಯವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net