ಸಾಮಾಜಿಕ ಜಾಲತಾಣದಲ್ಲಿ ಸುಳ್ಳವದಂತಿ: ಜಿಲ್ಲಾ ಪೊಲೀಸ್ ಇಲಾಖೆ ಸ್ಪಷ್ಟನೆ

WhatsApp Image 2023-08-09 at 1.10.56 PM
Published on

ಮಂಡ್ಯ: ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ವೇಳೆ ದರೋಡೆಕೋರರು ವಾಹನ ಸವಾರರನ್ನು ಬೆದರಿಸಿ ಹಣ ದೋಚುತ್ತಿದ್ದಾರೆನ್ನುವ ಮಾಹಿತಿ ಹಾಗೂ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ಜಿಲ್ಲಾ ಪೊಲೀಸ್ ಇಲಾಖೆ, ಆ ಫೋಟೋ ಬೆಂ-ಮೈ ಹೆದ್ದಾರಿಗೆ ಸಂಬಂಧಿಸಿದ್ದಲ್ಲ. ಜತೆಗೆ ದರೋಡೆ ನಡೆಯುತ್ತಿದೆ ಎನ್ನುವಂತಹ ಪ್ರಕರಣಗಳು ನಡೆದಿಲ್ಲವೆಂದು ತಿಳಿಸಿದೆ.

ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಖಾತೆಯಲ್ಲಿ ಹೆದ್ದಾರಿಯ ಮಧ್ಯೆ ಮೊಳೆಗಳಿರುವ ಫೋಟೋವನ್ನು ಹಾಕಿ ರಾತ್ರಿ ವೇಳೆ ಸಂಚಾರ ಮಾಡಬೇಡಿ. ಸವಾರರು ವಾಹನ ನಿಲ್ಲಿಸಿದರೆ ಸಹಾಯ ಮಾಡುವ ನೆಪದಲ್ಲಿ ಬಂದು ಚಾಕು ತೋರಿಸಿ ಹಣ ದೋಚುತ್ತಾರೆ. ಶ್ರೀರಂಗಪಟ್ಟಣದಿಂದ ಕೆಂಗೇರಿವರೆಗೆ ಒಂದು ಅಂಗಡಿ ಹಾಗೂ ಕಟ್ಟಡವಿಲ್ಲ. ದರೋಡೆಕೋರರಿಗೆ ಹೈವೇ ಪೊಲೀಸರು ಸಂಪೂರ್ಣ ಬೆಂಬಲ ನೀಡುತ್ತಾರೆಂದು ಹಾಕಿದ್ದರು. ಈ ಫೋಸ್ಟ್ ಸಾಕಷ್ಟು ವೈರಲ್ ಆಗಿದೆ.

ಈ ಹಿನ್ನೆಲೆಯಲ್ಲಿ ಫೋಟೋ ಹಾಗೂ ಮಾಹಿತಿ ಸುಳ್ಳೆಂದು ಪೊಲೀಸ್ ಇಲಾಖೆ ತಿಳಿಸಿದೆ. ಮಾತ್ರವಲ್ಲದೆ ಸಾರ್ವಜನಿಕರು ಎಲ್ಲ ಸಮಯದಲ್ಲೂ ಸುರಕ್ಷಿತವಾಗಿ ಪ್ರಯಾಣ ಮಾಡಬಹುದಾಗಿದೆ. ಹೆದ್ದಾರಿಯಲ್ಲಿ ನಡೆಯುವ ಅಪರಾಧ ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ. ಜತೆಗೆ ಹೆದ್ದಾರಿಯಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿಸಿ ಭದ್ರತೆ ನೀಡಲಾಗಿದೆ. ಸಾರ್ವಜನಿಕರು ಇಂತಹ ವದಂತಿಗೆ ಕಿವಿಗೊಡದೇ ಹಾಗೂ ಸಾಮಾಜಿಕ ಜಾಲತಾಣದಲ್ಲಿ ವಿಷಯವನ್ನು ಹಂಚಿಕೊಳ್ಳುವ ಮುನ್ನ ಅದರ ಪರಾಮರ್ಶಿಸಬೇಕೆಂದು ಸಲಹೆ ನೀಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net