ನಕಲಿ ಕ್ರಿಮಿನಾಶಕ ತಯಾರಿಕೆ, ಕೈಗಾರಿಕೆ ವಲಯದ ಗೋದಾಮಿನ ಮೇಲೆ ದಾಳಿ, ಖೊಟ್ಟಿ ಔಷಧ ಜಫ್ತು-ಇಬ್ಬರ ಬಂಧನ

FAKE FERTILISER
ವಿಜಯಪುರ ನಗರದ ಕೈಗಾರಿಕೆ ವಲಯದ ಗೋದಾಮಿನ ಮೇಲೆ ದಾಳಿ ನಡೆಸಿ ವಶಕ್ಕೆ ಪಡೆದ ಸಾಮಗ್ರಿಗಳು. ಪಿಎಸ್‌ಐ ಬಸವರಾಜ ಎ.ತಿಪರಡ್ಡಿ ಮತ್ತಿತರರಿದ್ದಾರೆ.
Published on

ವಿಜಯಪುರ: ನಕಲಿ ಕ್ರಿಮಿನಾಶ ತಯಾರಿಕೆ ಅಡ್ಡೆ ಮೇಲೆ ದಾಳಿ ನಡೆಸಿರುವ ಪೊಲೀಸರು ಮತ್ತು ಕೃಷಿ ಅಧಿಕಾರಿಗಳು ಇಬ್ಬರನ್ನು ಬಂಧಿಸಿ ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಸಾಮಗ್ರಿ ವಶಕ್ಕೆ ಪಡೆದಿದ್ದಾರೆ.

ನಗರದ ಕೈಗಾರಿಕೆ ಪ್ರದೇಶದ ಗೋದಾಮಿನ ಮೇಲೆ ಗುರುವಾರ ಸಂಜೆಯೇ ದಾಳಿ ನಡೆದಿದ್ದು, ಇದೀಗ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕೊಂಡಗೂಳಿ ಗ್ರಾಮದ ವಿದ್ಯಾಸಾಗರ ಚಿನ್ನಾರೆಡ್ಡಿ ಮಲ್ಲಾಬಾದಿ ಹಾಗೂ ಕಲಬುರಗಿ ಜಿಲ್ಲೆಯ ಬೊಳನಿ ಗ್ರಾಮದ ಅಮರ ಗುರುನಾಥ ರೆಡ್ಡಿ ಬಂಧಿತ ಆರೋಪಿಗಳು. ಇವರಿಂದ ಸುಮಾರು 1,36,98,523 ರೂ. ಮೌಲ್ಯದ ಲೈಫ್ ಅಗೋ ಕೆಮಿಕಲ್ ಹೆಸರಿನಲ್ಲಿರುವ ನಕಲಿ ಕ್ರಿಮಿನಾಶಕ ಔಷಧಗಳನ್ನು ಜಫ್ತು ಮಾಡಿಕೊಳ್ಳಲಾಗಿದೆ.

ಗೋಲ್ಡನ್ ಡ್ರಾಪ್ ಕ್ರಾಪ್ ಪ್ರೊಟೆಕ್ಷನ್ ಎನ್ನುವ ಕಂಪನಿಯ ಬೋರ್ಡ್ ಹಾಕಿರುವ ಗೋದಮಿನಲ್ಲಿ ಲೈಫ್ ಅಗೋ ಕೆಮಿಕಲ್ ಕಂಪನಿಯ ಹೆಸರಿನಲ್ಲಿ ತಾವೇ ತಯಾರಿಸಿದ ನಕಲಿ ಕ್ರಿಮಿನಾಶಕ ಔಷಧಗಳಿಗೆ ಲೈಫ್ ಅಗೋ ಕೆಮಿಕಲ್ ಕಂಪನಿಯ ಲೇಬಲ್‌ಗಳನ್ನು ಅಂಟಿಸಿ, ಅನಧಿಕೃತವಾಗಿ ನಕಲಿ ಕ್ರಿಮಿನಾಶಕ ಔಷಧಗಳನ್ನು ತಯಾರಿಸಿ, ಗೋದಾಮಿನಲ್ಲಿ ಸಂಗ್ರಹಿಸಿಟ್ಟು ಮಾರಾಟ ಮಾಡುತ್ತಿದ್ದ ಅಧಿಕೃತ ಮಾಹಿತಿ ಆಧರಿಸಿ ಜಂಟಿ ಕಾರ್ಯಾಚರಣೆಗೆ ರೂಪುರೇಷೆ ಸಿದ್ಧಪಡಿಸಲಾಗಿತ್ತು.

ಎಎಸ್‌ಪಿ ರಾಮನಗೌಡ ಹಟ್ಟಿ, ಡಿವೈಎಸ್‌ಪಿ ಬಸವರಾಜ ಯಲಿಗಾರ, ಸಿಪಿಐ ಮಲ್ಲಯ್ಯ ಮಠಪತಿ, ಪಿಎಸ್‌ಐ ಬಸವರಾಜ ಎ.ತಿಪರಡ್ಡಿ, ಸಿಬ್ಬಂದಿ ಅಮಗೊಂಡ ಪರಪ್ಪ ಬಿರಾದಾರ ಹಾಗೂ ಕೃಷಿ ಇಲಾಖೆ ಅಧಿಕಾರಿಗಳನ್ನು ಒಳಗೊಂಡ ತಂಡ ಯಶಸ್ವಿಯಾಗಿ ಕಾರ್ಯಚರಣೆ ನಡೆಸಿದೆ ಎಂದು ಎಸ್‌ಪಿ ಲಕ್ಷ್ಮಣ ನಿಂಬರಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net