

ಹೊಸಪೇಟೆ: ನಕಲಿ ದಾಖಲೆ ಸಲ್ಲಿಸಿ ಮುಂಬಡ್ತಿ ಪಡೆದಿದ್ದ ಹಗರಿಬೊಮ್ಮನಹಳ್ಳಿ ತಾ.ಪಂ. ಯೋಜನಾಧಿಕಾರಿ ಉಮೇಶಗೌಡ ವೆಂಕನಗೌರನ್ನು ಸೇವೆಯಿಂದ ಅಮಾನತುಗೊಳಿಸಿ ಮತ್ತು ಹಿಂಬಡ್ತಿ ನೀಡಿ ಸರ್ಕಾರ ಆದೇಶ ಹೊರಡಿಸಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಈ ಹಿಂದೆ ಹಗರಿಬೊಮ್ಮನಹಳ್ಳಿ ಸಹಾಯಕ ಸಾಂಖಿಕ ಅಧಿಕಾರಿಯಾಗಿದ್ದ ಉಮೇಶ ಗೌಡ, ಸೇವೆಯಲ್ಲಿ ಮುಂಬಡ್ತಿ ಪಡೆಯಲು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ, ಮುಕ್ತ ಗಂಗೋತ್ರಿ, ಮೈಸೂರು ಹೆಸರಲ್ಲಿ ೨೦೦೭, ೨೦೦೮, ೨೦೦೯ನೇ ಸಾಲಿನ ನಕಲಿ ಬಿಎ ಅಂಕಪಟ್ಟಿ, ಪಾಸಿಂಗ್ ಸರ್ಟಿಫಿಕೇಟ್ ಮತ್ತು ಮೈಗ್ರೇಷನ್ ಪ್ರಮಾಣ ಪತ್ರಗಳನ್ನು ಸೃಷ್ಟಿಸಿದ್ದರು. ಅವುಗಳನ್ನು ಆರ್ಥಿಕ ಮತ್ತು ಸಾಂಖಿಕ ನಿರ್ದೇಶನಾಲಯಕ್ಕೆ ಸಲ್ಲಿಸಿ, ತಾಲೂಕು ಯೋಜನಾಧಿಕಾರಿಯಾಗಿ ಮುಂಬಡ್ತಿ ಪಡೆದಿರುವುದು ಇಲಾಖಾ ಪರಿಶೀಲನೆಯಿಂದ ದೃಢಪಟ್ಟಿದ್ದರಿಂದ ಜಿಲ್ಲಾ ಸಾಂಖಿಕ ಅಧಿಕಾರಿ ಸೆ.೧೩ ರಂದು ಹಗರಿಬಿಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಈ ಕುರಿತು ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳ ವರದಿ ಆಧರಿಸಿ, ಉಮೇಶ ಗೌಡ ಅವರನ್ನು ಸರ್ಕಾರದ ಮುಂದಿನ ಆದೇಶದವರೆಗೆ ಅಮಾನತುಗೊಳಿಸಿ ಸೆ.೧೬ ರಂದು ಜಿ.ಪಂ. ಸಿಇಒ ಹರ್ಷಲ್ ಬೋಯರ್ ನಾರಾಯಣರಾವ್ ಆದೇಶ ಹೊರಡಿಸಿದ್ದಾರೆ.
ಅದಕ್ಕೂ ಮುನ್ನ ಸೆ.೧೩ ರಂದು ಆರ್ಥಿಕ ಮತ್ತು ಸಾಂಖಿಕ ನಿರ್ದೇಶನಾಲಯದ ನಿರ್ದೇಶಕರು ಪ್ರತ್ಯೇಕ ಆದೇಶ ಹೊರಡಿಸಿದ್ದು, ಉಮೇಶಗೌಡ ಖೊಟ್ಟಿ ದಾಖಲೆ ಸಲ್ಲಿಸಿ ಪಡೆದಿದ್ದ ಸಹಾಯಕ ನಿದೇರ್ಶಕರ ಹುದ್ದೆಯ ಮುಂಬಡ್ತಿಯನ್ನು ರದ್ದುಗೊಳಿಸಿದ್ದಾರೆ. ಅವರಿಗೆ ಹಿಂಬಡ್ತಿ ನೀಡಿ, ಕೊಪ್ಪಳ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕಚೇರಿಯಲ್ಲಿ ಖಾಲಿ ಇರುವ ಸಹಾಯಕ ಸಾಂಖಿಕ ಅಧಿಕಾರಿ ಹುದ್ದೆಗೆ ಸ್ಥಳ ಮರುನಿಯುಕ್ತಿಗೊಳಿಸಿ ಆದೇಶ ಹೊರಡಿಸಿದ್ದಾರೆ.
ಸೆ.೧೩ ರಂದು ಪ್ರಕರಣ ದಾಖಲಾದ ಬಳಿಕ ನ್ಯಾಯಾಂಗ ಬಂಧನದಲ್ಲಿದ್ದ ಉಮೇಶಗೌಡ ಸದ್ಯ ಜಾಮೀನಿನ ಮೇಲೆ ಹೊರಗಿದ್ದಾರೆ.