ಮಳವಳ್ಳಿಯಲ್ಲಿ ನಕಲಿ ನೋಟಿನ ಹಾವಳಿ

19mlv1
Published on

ಮಳವಳ್ಳಿ: ಪಟ್ಟಣದ ಹಲವೆಡೆ 50-100 ರೂ. ಮುಖಬೆಲೆಯ ನಕಲಿ ನೋಟಿನ ಚಲಾವಣೆ ಹೆಚ್ಚಾಗಿದ್ದು, ಇದರಿಂದ ವರ್ತಕರು, ಪೆಟ್ರೋಲ್ ಬಂಕ್ ಹಾಗೂ ಸಣ್ಣ ವ್ಯಾಪಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.

ನಕಲಿ ನೋಟುಗಳನ್ನು ಚಲಾವಣೆ ಮಾಡುವ ಒಂದು ತಂಡವೇ ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮೀಣ ಪ್ರದೇಶಗಳಲ್ಲಿ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿದೆ ಎನ್ನಲಾಗಿದೆ. ಇವರು 50 ಮತ್ತು 100 ರೂ. ಮುಖಬೆಲೆಯ ನೋಟುಗಳನ್ನಷ್ಟೆ ಆಯ್ದ ಕೆಲವು ವ್ಯಕ್ತಿಗಳಿಗೆ ಕೊಟ್ಟು ಜನದಟ್ಟಣೆ ಇರುವ ವ್ಯಾಪಾರ ಕೇಂದ್ರಗಳಲ್ಲಿ ವಸ್ತುಗಳನ್ನು ಖರೀದಿಸುವುದು ಹಾಗೂ ಪೆಟ್ರೋಲ್ ಬಂಕ್‌ಗಳಲ್ಲಿ ಒಂದು ಸಾವಿರ ರೂ.ಗೆ ಪೆಟ್ರೋಲ್ ಅಥವಾ ಡೀಸೆಲ್ ಹಾಕಿಸಿಕೊಂಡು ಅಸಲಿ ನೋಟಿನ ಜತೆಗೆ ನಕಲಿ ನೋಟುಗಳನ್ನು ಸೇರಿಸಿ ಕೊಡುವುದು ಮತ್ತು ರಸ್ತೆ ಬದಿಗಳಲ್ಲಿ ವ್ಯಾಪಾರ ಮಾಡುವ ಸಣ್ಣ ವ್ಯಾಪಾರಿಗಳ ಬಳಿ ವಸ್ತುಗಳನ್ನು ಖರೀದಿಸಿ ಕಲರ್ ಪ್ರಿಂಟ್ ನೋಟುಗಳನ್ನು ಕೊಟ್ಟು ಹೋಗುತ್ತಿದ್ದಾರೆ.

ಅಸಲಿ ನೋಟನ್ನು ಕಲರ್ ಪ್ರಿಂಟ್ ಮಾಡಿ ನೋಟಿನ ಮಧ್ಯಭಾಗದಲ್ಲಿ ಬರುವ ಆರ್‌ಬಿಐ ಗೆರೆಯನ್ನು ಮಾರ್ಕ್‌ರ್ ಪೆನ್‌ಬಳಸಿ ಗೆರೆ ಎಳೆಯಲಾಗಿದೆ. ಆದರೆ, ಈ ನಕಲಿ ನೋಟಿಗೆ ಬಳಸಲಾಗಿರುವ ಪೇಪರ್ ತೆಳುವಾಗಿದ್ದು, ಕೈಯಲ್ಲಿ ಮುದುರಿದರೆ ಸಂಪೂರ್ಣವಾಗಿ ಪೇಪರ್ ಉಂಡೆಯಾಗುತ್ತದೆ. ಅಲ್ಲದೆ ಈ ನೋಟುಗಳು ಸಾರ್ವಜನಿಕರ ಕೈನಿಂದ ಕೈಗೆ ಚಲಾವಣೆಯಾಗುತ್ತಿದ್ದಂತೆ ಬಣ್ಣವೆಲ್ಲಾ ಮಾಸಿ ಬೇಗನೆ ಹರಿದು ಹೋಗುತ್ತದೆ. ಇದರಿಂದ ಪ್ರತಿದಿನ ಬ್ಯಾಂಕ್‌ಗಳಲ್ಲಿ ವ್ಯವಹಾರ ನಡೆಸುವ ಪೆಟ್ರೋಲ್ ಬಂಕ್ ಹಾಗೂ ಇತರ ವ್ಯಾಪಾರಿಗಳು ಬ್ಯಾಂಕ್‌ಗಳಿಗೆ ಹಣ ಕಟ್ಟಲು ಹೋದಾಗ ನೋಟು ಎಣಿಕೆ ಯಂತ್ರಕ್ಕೆ ಹಾಕಿದಾಗ ನಕಲಿ ನೋಟುಗಳು ಬೇರ್ಪಡುತ್ತವೆ. ಇವುಗಳನ್ನು ಬ್ಯಾಂಕ್ ಸಿಬ್ಬಂದಿ ಹಣ ಕಟ್ಟಿದ ಗ್ರಾಹಕನಿಗೆ ವಾಪಸ್ ಕೊಡದೆ ಹರಿದು ಬಿಸಾಡುತ್ತಾರೆ. ಇಂತಹ ಬಹಳಷ್ಟು ಸನ್ನಿವೇಶಗಳು ಪಟ್ಟಣದಲ್ಲಿ ಪ್ರತಿನಿತ್ಯ ಸಾರ್ವಜನಿಕ ವಲಯದಲ್ಲಿ ಕಾಣಸಿಗುತ್ತಿದ್ದು, ಸಾರ್ವಜನಿಕರು ಯಾವುದು ನಕಲಿ, ಅಸಲಿ ನೋಟು ಎಂದು ಗೊತ್ತಾಗದೆ ಪೇಚಿಗೆ ಸಿಲುಕುತ್ತಿದ್ದಾರೆ.

ಪೆಟ್ರೊಲ್ ಬಂಕ್‌ನಲ್ಲಿ ಇಂಧನ ಹಾಕುವ ಹುಡುಗರು 2 ಸಾವಿರ ಹಾಗೂ 500 ರೂ. ಮುಖಬೆಲೆಯ ನೋಟುಗಳನ್ನು ಪರಿಸೀಲಿಸಿ ತೆಗೆದುಕೊಳ್ಳುತ್ತಾರೆ. ಆದರೆ, 50-100 ರ ನೋಟುಗಳನ್ನು ಆತುರದಲ್ಲಿ ಪಡೆದುಕೊಳ್ಳುವುದರಿಂದ ಸಂಜೆ ಲೆಕ್ಕ ಕೊಡುವ ಸಂದರ್ಭದಲ್ಲಿ 50-100 ರ ನೋಟುಗಳನ್ನು ನೋಟು ಪರಿಶೀಲನಾ ಯಂತ್ರಕ್ಕೆ ಹಾಕಿದಾಗ ಪ್ರತ್ಯೇಕಗೊಂಡ 50 ಹಾಗೂ 100 ರೂ. ಮುಖಬೆಲೆಯ ಎರಡು ಕಲರ್ ಪ್ರಿಂಟ್ ನೋಟುಗಳು ದೊರೆತ್ತಿದ್ದು, ಇದರ ಬಗ್ಗೆ ಸಂಬಂಧಪಟ್ಟವರು ಸೂಕ್ತ ಕ್ರಮ ತೆಗೆದುಕೊಂಡು ನಕಲಿ ನೋಟುಗಳ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು.
> ಶ್ಯಾಮ್‌ಸುಂದರ್. ವ್ಯವಸ್ಥಾಪಕ. ಬಸವೇಶ್ವರ ಪೆಟ್ರೋಲ್ ಬಂಕ್


ಇತ್ತೀಚೆಗೆ ಮದ್ದೂರು ತಾಲೂಕಿನಲ್ಲಿ ರೈತನೊಬ್ಬನಿಗೆ ನಕಲಿ ನೋಟು ಕೊಟ್ಟು ಕುರಿ ಖರೀದಿಸಿದ್ದು, ಕೆಸ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಳವಳ್ಳಿ ವ್ಯಾಪ್ತಿಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ. ನಕಲಿ ನೋಟುಗಳ ಚಲಾವಣೆ ಮಾಡುತ್ತಿರುವ ಗ್ಯಾಂಗ್‌ನ ಜಾಲವನ್ನು ಭೇದಿಸಲು ಶೀಘ್ರವಾಗಿ ತನಿಖಾ ತಂಡವನ್ನು ರಚಿಸಿ ಆರೋಪಿಗಳ ಪತ್ತೆಗೆ ಕ್ರಮ ವಹಿಸಲಾಗುವುದು.
> ಪೃಥ್ವಿ. ಡಿವೈಎಸ್‌ಪಿ ಮಳವಳ್ಳಿ ಉಪವಿಭಾಗ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net